ಅಕ್ರಮ ಮರಳುಗಾರಿಕೆ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು: ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಮಂಗಳೂರು: ಅಕ್ರಮ ಮರಳುಗಾರಿಕೆಯಿಂದ ಮುಳುಗಡೆಯಾಗುತ್ತಿರುವ ಪಾವೂರು ಉಳಿಯ ಅಡ್ಯಾರ್, ಉಳ್ಳಾಲ ಹೊಯ್ಗೆ, ರಾಣಿಪುರ ದ್ವೀಪಗಳನ್ನು ಉಳಿಸಿ ದ್ವೀಪವಾಸಿಗಳನ್ನು ರಕ್ಷಿಸಬೇಕೆಂದು ಆಗ್ರಹಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ದ್ವೀಪ ಸಮೀಪದ ಗ್ರಾಮಸ್ಥರು, ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಸೇರಿದಂತೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ೨-೩ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರು.
ಪ್ರತಿಭಟನೆಗಿಂತ ಮೊದಲು ಪ್ರತಿಭಟನಾಕಾರರು ನಗರದ ಬಲ್ಮಠದ ಸಿಎಸ್‌ಐ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್, ಇಲ್ಲಿನ ಜಿಲ್ಲಾಡಳಿತಕ್ಕೆ ಮರಳು ದಂಧೆಕೋರರ ಜೊತೆ ಸಭೆ ನಡೆಸಲು ಸಮಯವಿದೆ. ಆದರೆ ಮರಳು ದಂಧೆಕೋರರಿಂದ ಸಂತ್ರಸ್ಥರಾದ ಗ್ರಾಮಸ್ಥರ ಅಹವಾಲು ಕೇಳಲು ಪುರುಸೊತ್ತು ಇಲ್ಲ ಎಂದು ಆಪಾದಿಸಿದರು. ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಗೊತ್ತಿದ್ದರೂ ಪೊಲೀಸರು, ಜಿಲ್ಲಾಧಿಕಾರಿಯವರು ಯಾಕೆ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಅಲ್ಲಿ ಅಕ್ರಮ ಮರಳುದಂಧೆ ನಡೆಯುತ್ತಿರುವುದು ಹೌದಾದಲ್ಲಿ ದಂಧೆಕೋರರೊಂದಿಗೆ ಶಾಮೀಲಾಗಿರುವ ಗಣಿ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಮೇಲೆಯೂ ಕ್ರಮವಾಗಬೇಕು. ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಯಾರಾದರೂ ಮಾಹಿತಿ ನೀಡಿದ್ದಲ್ಲಿ ಅವರೇ ಅಕ್ರಮ ಮರಳುದಂಧೆಕೋರರಿಗೆ ಕರೆಮಾಡಿ ತಿಳಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ಇದೇ ರೀತಿ ಮರಳುಗಾರಿಕೆ ಮುಂದುವರಿದಲ್ಲಿ ಕೊಣಾಜೆ, ಉಳ್ಳಾಲ ಸೇರಿದಂತೆ ಎಲ್ಲಾ ಠಾಣೆಗಳ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದರು.