ಶೇಂಗಾ, ಕುಸುಬೆ ಉತ್ಪನ್ನ ಖರೀದಿ ಆರಂಭ
ಧಾರವಾಡ,ಜು13: 2023-24 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಶೇಂಗಾ ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‍ಗೆ ರೂ.6,377 ರಂತೆ ಹಾಗೂ ಕುಸುಬೆ ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‍ಗೆ ರೂ. 5,800 ರಂತೆ ಖರೀದಿಸಲಾಗುತ್ತದೆ ಎಂದು ಜಿಲ್ಲಾ ಟಾಸ್ಕಪೋರ್ಸ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಬಲ ಬೆಲೆಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಶೇಂಗಾ ಹಾಗೂ ಕುಸುಬೆ ಉತ್ಪನ್ನಗಳ ಮಾರಾಟಕ್ಕಾಗಿ ರೈತರಿಗೆ ನೋಂದಣಿ ಮಾಡಿಕೊಳ್ಳಲು ಜುಲೈ 1 ರಿಂದ ಅಗಸ್ಟ 14 ರ (45 ದಿನಗಳ) ವರೆಗೆ ಮತ್ತು ನೋಂದಾಯಿತ ಧಾರವಾಡ ಜಿಲ್ಲೆಯ ರೈತರಿಂದ ಮಾತ್ರ ಸೆಪ್ಟೆಂಬರ 28, 2024 ರವರೆಗೆ (90 ದಿನಗಳು) ಖರೀದಿಸಲಾಗುತ್ತದೆ. ಮತ್ತು ಶೇಂಗಾ ಹಾಗೂ ಕುಸುಬೆ ಉತ್ಪನ್ನಗಳನ್ನು ಖರೀದಿಸಲು ಸರ್ಕಾರದಿಂದ ಕುಂದಗೋಳ, ಹುಬ್ಬಳ್ಳಿ, ನವಲಗುಂದ ತಾಲೂಕುಗಳ 7 ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
*ಶೇಂಗಾ & ಕುಸುಬೆ ಖರೀದಿ ಕೇಂದ್ರಗಳ ವಿವರಗಳು:
ಕುಂದಗೋಳ ತಾಲೂಕಿನ ಎ.ಪಿ.ಎಂ.ಸಿ, ಕುಂದಗೋಳ. ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಯರಗುಪ್ಪಿ ಮತ್ತು ಕಮಡೊಳ್ಳಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಕಮಡೊಳ್ಳಿ, ಸಂಶಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಯರಗುಪ್ಪಿ ಮತ್ತು ಇಂಗಳಗಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಹಿರೇಹರಕುಣಿ ಹಾಗೂ ಕಳಸ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಕಳಸ ಗ್ರಾಮದಲ್ಲಿ ಶೇಂಗಾ & ಕುಸುಬೆ ಖರೀದಿ ಕೇಂದ್ರವನ್ನು ತೆರೆಯಲಾಗಿದೆ.
ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಶಿರಗುಪ್ಪಿ ಹಾಗೂ ನವಲಗುಂದ ತಾಲೂಕಿನ ಶಿರೂರ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಶಿರೂರ ಗ್ರಾಮದಲ್ಲಿ ಶೇಂಗಾ & ಕುಸುಬೆ ಖರೀದಿ ಕೇಂದ್ರವನ್ನು ತೆರೆಯಲಾಗಿದೆ.
*ಉತ್ಪನ್ನವನ್ನು ಖರೀದಿಸಲು ಅಗತ್ಯವಿರುವ ದಾಖಲೆಗಳು:
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾ ಮತ್ತು ಕುಸುಬೆ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ನೋಂದಣಿಗಾಗಿ ತಮ್ಮ ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ. ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿಯನ್ನು ಸಲ್ಲಿಸಬೇಕು.
ಕ್ರಮಗಳು: ಶೇಂಗಾ & ಕುಸುಬೆ ಉತ್ಪನ್ನ ಚೆನ್ನಾಗಿ ಒಣಗಿರಬೇಕು, ತೇವಾಂಶವು ಶೇ.12 ಕ್ಕಿಂತ ಕಡಿಮೆ ಇರಬೇಕು. ಶೇಂಗಾ ಮತ್ತು ಕುಸುಬೆ ಉತ್ಪನ್ನವು ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರವನ್ನು ಹೊಂದಿರಬೇಕು. ಗಟ್ಟಿಯಾಗಿರಬೇಕು, ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು, ಸಾಣಿಗೆಯಿಂದ ಸ್ವಚ್ಛಗೊಳಿಸಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು.ರೈತರಿಗೆ ಜಿಲ್ಲಾ ಸಹಾಯಕ ವ್ಯವಸ್ಥಾಪಕರು ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟದಿಂದ ಅವರು ನೀಡುವ ಗೋಣಿ ಚೀಲದಲ್ಲಿ 50 ಕೆ.ಜಿ. ಪ್ರಮಾಣದಲ್ಲಿ ತುಂಬಬೇಕು.
ಶೇಂಗಾ ಪ್ರತಿ ರೈತರಿಂದ ಎಕರೆಗೆ 03 ಕ್ವಿಂಟಾಲ್‍ನಂತೆ ಗರಿಷ್ಟ 15 ಕ್ವಿಂಟಾಲ್ ಪ್ರಮಾಣದ ಎಫ್‍ಎಕ್ಯೂ ಗುಣಮಟ್ಟದ ಉತ್ಪನ್ನವನ್ನು ಖರೀದಿಸಲಾಗುವುದು. ಕುಸುಬೆ ಪ್ರತಿ ರೈತರಿಂದ ಎಕರೆಗೆ 05 ಕ್ವಿಂಟಾಲ್‍ನಂತೆ ಗರಿಷ್ಟ 15 ಕ್ವಿಂಟಾಲ್ ಪ್ರಮಾಣದ ಎಫ್‍ಎಕ್ಯೂ ಗುಣಮಟ್ಟದ ಉತ್ಪನ್ನವನ್ನು ಖರೀದಿಸಲಾಗುವುದು. ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‍ಗೆ ರೂ.6,377 ರಂತೆ ಶೇಂಗಾ ಖರೀದಿಸಲಾಗುವುದು. ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‍ಗೆ ರೂ.5,800 ರಂತೆ ಕುಸುಬೆ ಖರೀದಿಸಲಾಗುವುದು. ರೈತರ ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯು ಪ್ರಾರಂಭವಾಗಿದೆ.
ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಖರೀದಿಸಲಾಗುವುದು. ಧಾರವಾಡ ಜಿಲ್ಲೆಯ ರೈತರು ಇದರ ಸದುಪಯೋಗಪಡಿಸಿಕೊಂಡು ಯೋಜನೆಯ ಯಶಸ್ಸಿಗೆ ಸಹಕರಿಸಲು ಜಿಲ್ಲಾಧಿಕಾರಿಗಳು ಕೋರಿದ್ದಾರೆ.
ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ಇದರ ಉಪಯೋಗವನ್ನು ರೈತರೇ ನೇರವಾಗಿ ಪಡೆಯಬೇಕು. ಸಮಸ್ಯೆಗಳಿದ್ದಲ್ಲಿ, ಹುಬ್ಬಳ್ಳಿ, ಕುಂದಗೋಳ ಮತ್ತು ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರನ್ನು ಹಾಗೂ ಜಿಲ್ಲಾ ಸಹಾಯಕ ವ್ಯವಸ್ಥಾಪಕರು ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತ ಹುಬ್ಬಳ್ಳಿ ಅಥವಾ ದೂರವಾಣಿ ಸಂಖ್ಯೆ: 9900553956 ಅನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.