ರೈತರಿಗೆ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಾಗಾರ
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಜು13: ಪಟ್ಟಣಕ್ಕೆ  ಸಮೀಪದ ಚಿಲಕನಹಟ್ಟಿ ಗ್ರಾಮದಲ್ಲಿ ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ರೈತರಿಗಾಗಿ ಒಂದು ದಿನದ ಹೊರಾಂಗಣ  ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
 ಒಂದು ತರಬೇತಿ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ  ಸೂಕ್ಷ್ಮ ನೀರಾವರಿ ಯೋಜನೆ ಅಡಿಯಲ್ಲಿ ವಿವಿಧ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ಘಟಕಗಳ ಉಪಯೋಗಗಳು ಹಾಗೂ ಅವುಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
 ಸೂಕ್ಷ್ಮ ನೀರಾವರಿ ಘಟಕಗಳ ಬಳಕೆಯಿಂದ ಶೇಕಡ 30 ರಿಂದ 40ರಷ್ಟು ನೀರಿನ ಉಳಿತಾಯ ಮಾಡಬಹುದು ಅಲ್ಲದೇ ಕಳೆಗಳ ನಿರ್ವಹಣೆ, ರೋಗಗಳ ಹರಡುವಿಕೆ ತಡೆಗಟ್ಟುವ ವಿಧಾನ, ಆಳಿನ ಖರ್ಚು ಉಳಿತಾಯ, ರಸಗೊಬ್ಬರವನ್ನು ನೀರಿನ ಮುಖಾಂತರ ಗಿಡಗಳಿಗೆ ಒದಗಿಸುವ ವಿಧಾನ, ಶೇಕಡ 20 ರಿಂದ 30ರಷ್ಟು ಹೆಚ್ಚಿನ ಇಳುವರಿ ಪಡೆಯುವ ವಿಧಾನಗಳನ್ನು ರೈತರಿಗೆ ತಿಳಿಯಪಡಿಸಿದರು.
ಸದರಿ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಬೆಳೆಗಳಲ್ಲಿ ಬೀಜೋಪಚಾರದ ಮಹತ್ವ ಹಾಗೂ ಸುರಕ್ಷಿತ ಕೀಟನಾಶಕದ ಬಳಕೆ ಬಗ್ಗೆ ಅರಿವನ್ನು ಮೂಡಿಸಲಾಯಿತು. ವಿವಿಧ ಬೆಳೆಗಳಲ್ಲಿ ಬೀಜೋಪಚಾರ ಮಾಡುವುದರಿಂದ ಮುಂದೆ ಬರತಕ್ಕಂತಹ ರೋಗಗಳನ್ನು ತಡೆಗಟ್ಟುವ ವಿಧಾನ, ಸುಣ್ಣದ ನೀರಿನೊಂದಿಗೆ  ಬೀಜೋಪಚಾರ  ಮಾಡುವುದರಿಂದ ಬರ  ನಿರೋಧಕತೆಯನ್ನು ಹೆಚ್ಚಿಸುವ ವಿಧಾನ, ಏಕದಳ ಧಾನ್ಯ  ಬೆಳೆಗಳನ್ನು ಜೈವಿಕ ಗೊಬ್ಬರ ಅಜೋಸ್ಪಿರಲಂ, ರಂಜಕ ಕರಗಿಸುವ ಜೈವಿಕ ಗೊಬ್ಬರ ಹಾಗೂ ಟ್ರೈಕೊಡರ್ಮ ಈ ಮೂರನ್ನು ಒಟ್ಟಿಗೆ  ಬೆಳೆಗಳಿಗೆ ಬೀಜೋಪಚಾರ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯುವ ವಿಧಾನಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೊಸಪೇಟೆ ಸಹಾಯಕ ಕೃಷಿ ನಿರ್ದೇಶಕರಾದ ವಾಮದೇವ ಕೊಳ್ಳಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ರಮೇಶ್, ಕೃಷಿ ಅಧಿಕಾರಿಗಳಾದ ಅಭಿಲಾಷ, ವಿದ್ಯಾವತಿ ಹೊಸಮನಿ, ನಾಜ್ನೀನ್ ನದಾಫ್, ಶಿವಮೂರ್ತಿ, ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ರೈತರು ಉಪಸ್ಥಿತರಿದ್ದರು.