ರಸ್ತೆಗಳ ಅಭಿವೃದ್ಧಿಯಿಂದ ಸಂಚಾರ, ವ್ಯಾಪಾರ ಸುಗಮ – ಶಾಸಕ ಡಾ ಶ್ರೀನಿವಾಸ ಎನ್ ಟಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.13 :-  ಕೂಡ್ಲಿಗಿ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಒಂದೆಡೆಯಿಂದ ಇನ್ನೊಂದೆಡೆ ಹೋಗಿಬರಲು ಸುಗಮ ಸಂಚಾರದ ಜೊತೆಗೆ ವ್ಯಾಪಾರ ವಹಿವಾಟು ಜಾಸ್ತಿಯಾಗಲಿದೆ ಹಾಗೂ ಕ್ಷೇತ್ರದ ಪ್ರಗತಿ ಸಹ ಹೊಂದಲಿದೆ ಎಂದು ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಪೂಜಾರಹಳ್ಳಿಯಲ್ಲಿ 9.90 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡುತ್ತಾ  ಕಾನಹೊಸಹಳ್ಳಿ ಮತ್ತು ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಬಳಿಯ ರಾಷ್ಟ್ರೀಯ  ಹೆದ್ದಾರಿಗಳಿಗೆ ಸಂಪರ್ಕಿಸುವ ರಸ್ತೆಗಳು ಸೇರಿ ಗ್ರಾಮೀಣ ಮತ್ತು ಗಡಿಭಾಗದ ರಸ್ತೆಗಳಿಗೆ ಕಲ್ಯಾಣಪಥ ಮತ್ತು ಪ್ರಗತಿಪಥ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರಲ್ಲದೆ, ತಾಲೂಕಿನ ಸಿದ್ದಾಪುರ, ಬಯಲುತುಂಬರಗುದ್ದಿ, ಸಿಡೇಗಲ್ಲು, ಪೂಜಾರಹಳ್ಳಿ, ಮೇಗಳ ಕರ್ನಾರಹಟ್ಟಿ, ಐಗಳ ಮಲ್ಲಾಪುರ, ಹಾಲಸಾಗರ, ಗುಣಸಾಗರ, ಮಂಗಾಪುರ ಹಾಗೂ ನಾಗರಕಟ್ಟೆ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಭೂಮಿಪೂಜೆ ನೆರವೇರಿಸಲಾಗಿದೆ. ತಾಲೂಕಿನಲ್ಲಿ ಗುಣಮಟ್ಟದ ಹಾಗೂ ಸುಸಜ್ಜಿತವಾದ ರಸ್ತೆಗಳ ನಿರ್ಮಾಣದ ಗುರಿ ಹೊಂದಿದ್ದು, ಲೋಕೋಪಯೋಗಿ ಸಚಿವರೊಂದಿಗೆ ಚರ್ಚಿಸಿ ಅನುದಾನ ಪಡೆಯಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಜ್ಯೋತಿ ವೆಂಕಟೇಶ್‌ನಾಯ್ಕ, ಉಪಾಧ್ಯಕ್ಷೆ ದುರುಗಮ್ಮ ದುರುಗಪ್ಪ, ಮುಖಂಡರಾದ ಕಲ್ಲಹಳ್ಳಿ ವೆಂಕಟೇಶ್, ರಾಜಣ್ಣ, ಡಾ.ಸಿದ್ದೇಶ್ ಕಾತ್ರಿಕೆಹಟ್ಟಿ, ಓಬಣ್ಣ, ಪೂಜಾರಹಳ್ಳಿ ವಿಶ್ವನಾಥ, ಮಾಳೆಹಳ್ಳಿ ಎ.ಕೆ.ಮಂಜುನಾಥ, ಗ್ರಾಪಂ ಸದಸ್ಯ ನಾಗರಾಜ, ಗುತ್ತಿಗೆದಾರ ಸಾಲಿ ಬಸವರಾಜ ಸೇರಿ ಇತರರಿದ್ದರು.