ಮಕ್ಕಳಿಗೆ ಡೆಂಗ್ಯೂ ಪ್ರತಿಬಂಧಕ ಲಸಿಕೆ ಹಾಕಿಸಿ
ಬೈಲಹೊಂಗಲ,ಜು13: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾವಿರಾರು ಮಕ್ಕಳು ಜ್ವರ ಶೀತ ನೆಗಡಿ, ಕೆಮ್ಮಿನ ಬಾಧೆಯಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡಿ ಹಲವು ಕಡೆ ಸಾವುಗಳು ಕೂಡ ಸಂಭವಿಸುತ್ತಿವೆ. ಆದ್ದರಿಂದ 8 ವರ್ಷದ ಮೇಲಿನ ಮಕ್ಕಳಿಗೆ ಕಡ್ಡಾಯವಾಗಿ ಡೆಂಗ್ಯೂ ಪ್ರತಿಬಂಧಕ ಲಸಿಕೆ ಹನಿ ಹಾಕಿ ಮಂಜಾಗೃತೆ ವಹಿಸಬೇಕು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ತಾಲೂಕಿನ ಮಲ್ಲಮ್ಮನ ಬೆಳವಡಿಯ ಈಶಪ್ರಭು ಶಿಕ್ಷಣ ಸಂಸ್ಥೆಯ ರಾಣಿ ಮಲ್ಲಮ್ಮ ಸಂಯುಕ್ತ ಪದವಿ ಪೂರ್ವ ಮತ್ತು ಪ್ರೌಢ ಪ್ರಾಥಮಿಕ ಶಾಲೆಯ 8 ವರ್ಷದ ಮೇಲಿನ ಮಕ್ಕಳಿಗೆ ಡೆಂಗ್ಯೂ ಪ್ರತಿಬಂಧಕ ಲಸಿಕೆ ಹನಿ ನೀಡುವ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈಜಿಪ್ಟಾ ಎನ್ನಲಾಗುವ ಮಾರಕ ಸೊಳ್ಳೆ ಕಡಿತದಿಂದ ಈ ಡೆಂಗ್ಯೂ ಖಾಯಿಲೆ ಹರಡುತ್ತಿದ್ದು ಮನೆ ಮುಂದೆ ಮತ್ತು ಇತರೆಡೆ ನೀರು ನಿಂತು ಗಲೀಜಾಗದಂತೆ ನೋಡಿಕೊಳ್ಳಬೇಕು. ನಿರಂತರ ಸ್ಚಚ್ಛತಾ ಕ್ರಮಗಳಿಂದ ಈ ಖಾಯಿಲೆ ಬರದಂತೆ ತಡೆಯಬಹುದು ಎಂದು ಅವರು ಸಲಹೆ ನೀಡಿದರು.
ಸಂಸ್ಥೆ ಕಾರ್ಯದರ್ಶಿ ಎಮ.ಎಮ್.ಕಾಡೇಶನವರ ಮಾತನಾಡಿದರು. ಪ್ರಮುಖರಾದ ಶ್ರೀಶೈಲ ಎಡಳ್ಳಿ, ನಿಂಗಪ್ಪ ಚೌಡಣ್ಣವರ, ಮಡಿವಾಳಪ್ಪ ಹೋಟಿ, ಆನಂದ ಮೂಗಿ, ಅಶೋಕ ಮಾರಿಹಾಳ, ಎನ್.ಎಮ್.ಕರೀಕಟ್ಟಿ, ಚಂದನ ಕೌಜಲಗಿ, ಆದರ್ಶ ಗುಂಡಗೋವಿ, ಎಮ್.ಪಿ.ಉಪ್ಪಿನ, ರಾಜು ದಳವಾಯಿ ಸೇರಿದಂತೆ ದೊಡವಾಡ ಗ್ರಾಮದ ಶ್ರೀ ವೀರಭದ್ರೆಶ್ವರ ಪ್ರೌಢ ಮತ್ತು ಪ್ರಾಥಮಿಕ ಹಾಗೂ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ಕೂಡ ಡಾ.ವಿಶ್ವನಾಥ ಪಾಟೀಲರಿಂದ ಡೆಂಗ್ಯೂ ಪ್ರತಿಬಂಧಕ ಲಸಿಕೆ ಹನಿ ನೀಡುವ ಶಿಬಿರಕ್ಕೆ ಚಾಲನೆ ನೀಡಲಾಯಿತು.
ವಿಜ್ಞಾನ ಶಿಕ್ಷಕ ಕೆ.ಬಿ.ಕಡೆಮನಿ ಡೆಂಗ್ಯೂ ಪ್ರಮುಖ ಲಕ್ಷಣಗಳು ಮತ್ತು ಅದು ಬರದಂತೆ ಅನುಸರಿಸಬೇಕಾದ ಉಪಯಯಕ್ತ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಮುಖ್ಯ ಶಿಕ್ಷಕಿ ಬಿ.ಆರ್.ಹುತಮಲ್ಲಮನವರ, ದೈಹಿಕ ಶಿಕ್ಷಕ ಎಮ್.ಸಿ.ಸಂಗೊಳ್ಳಿ ಮತ್ತು ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು.