ಅಮೂಲ್ಯ ಜೀವ ರಕ್ಷಣೆಗೆ ಸಂಚಾರಿ ನಿಯಮ ಪಾಲಿಸಿ
ಕೋಲಾರ,ಜು,೧೩- ವಾಹನ ಚಲಾಯಿಸುವಾಗ ಸಂಚಾರಿ ನಿಯಮ ಪಾಲಿಸಿ, ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ಅಮೂಲ್ಯ ಜೀವ ಉಳಿಸಿ ಎಂದು ದೇವರಾಜ ಅರಸು ವೈದ್ಯಕೀಯ ಮಹಾ ವಿದ್ಯಾಲಯದ ಉಪಕುಲಪತಿ ಡಾ.ವೆಂಗಮ್ಮ ಕರೆ ನೀಡಿದರು.
ನಗರ ಹೊರವಲಯದ ದೇವರಾಜ ಅರಸು ವೈದ್ಯಕೀಯ ಮಹಾ ವಿದ್ಯಾಲಯದ ಕ್ರೀಡಾಂಗಣದಲ್ಲಿ ಕಾಲೇಜಿನ ಕ್ರಿಕೆಟ್ ಕ್ಲಬ್‌ನಿಂದ ನಡೆದ ಐಪಿಎಲ್ ಪಂದ್ಯಗಳಲ್ಲಿ ಕಾಲೇಜಿನ ಆರ್‌ಸಿಬಿ ತಂಡದ ಉಸ್ತುವಾರಿ ವಹಿಸಿರುವ ಬ್ಯಾಲಹಳ್ಳಿಯ ವೀಣಾ ಎಂ.ಗೋವಿಂದಗೌಡರ ಪುತ್ರ ಡಾ.ಮನೋಹರ್‌ಗೌಡ ಬಿ.ಜಿ ಅವರು ಸಾಮಾಜಿಕ ಕಾಳಜಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಜಾಲಪ್ಪ ಆಸ್ಪತ್ರೆಯ ಭದ್ರತಾ ನೌಕರರು ಹಾಗೂ ಸಿಬ್ಬಂದಿಗೆ ೧೫೦ ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅತಿವೇಗ, ಸಂಚಾರಿ ನಿಯಮ ಪಾಲನೆಯಾಗದ ಕಾರಣ ದಿನ ನಿತ್ಯವೂ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿದೆ, ದ್ವಿಚಕ್ರವಾಹನ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದಿರುವವರೆ ತಲೆಗೆ ಗಾಯವಾಗಿ ಸಾವನ್ನಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ ಈ ಸಾವುಗಳನ್ನು ತಡೆಯಲು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿದರೆ ಅಮೂಲ್ಯ ಜೀವ ಉಳಿಯುತ್ತದೆ ಎಂದರು. ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಕೆ.ಪ್ರಭಾಕರ್ ಮಾತನಾಡಿ, ಕಾರು ಚಾಲನೆ ಸಂದರ್ಭದಲ್ಲೂ ಸೀಟ್ ಬೆಲ್ಟ್ ಕಡ್ಡಾಯವಾಗಿ ಬಳಸಬೇಕು, ಸಂಚಾರಿ ನಿಯಮಗಳ ಪಾಲನೆ ಜತೆಗೆ ಅತಿ ವೇಗವಾಗಿ ವಾಹನ ಚಲಾಯಿಸಬಾರದು ಎಂದು ಕಿವಿಮಾತು ಹೇಳಿದರು.
೧೮ ವರ್ಷ ತುಂಬಿದ ಹಾಗೂ ಚಾಲನಾ ಪರವಾನಗಿ ಪಡೆದವರು ಮಾತ್ರವೇ ವಾಹನ ಓಡಿಸಬಹುದು ಆದರೆ ಪೋಷಕರು ತಮ್ಮ ಮಕ್ಕಳ ಮೇಲಿನ ಅತಿಯಾದ ಪ್ರೀತಿಯಿಂದ ಚಿಕ್ಕ ವಯಸ್ಸಿನಲ್ಲೇ ವಾಹನಚಲಾಯಿಸಲು ಅವಕಾಶ ಕಲ್ಪಿಸುತ್ತಿರುವುದು ಅಘಾತಕಾರಿ ಎಂದ ಅವರು, ಇದರಿಂದ ಸಾವುನೋವಿನ ಜತೆಗೆ ಪೋಷಕರಿಗೂ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಸಿದರು.
ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಕುಲಸಚಿವ ಡಾ.ಮುನಿನಾರಾಯಣ, ಮುಖ್ಯ ಆಡಳಿತಾಧಿಕಾರಿ ಡಾ.ಡಿವಿಎಲ್‌ಎನ್ ಪ್ರಸಾದ್ ಮಾತನಾಡಿ, ಸಾಮಾಜಿಕ ಕಾಳಜಿಯಿಂದ ಡಾ.ಮನೋಹರಗೌಡ ಪ್ರತಿವರ್ಷವೂ ಸಾಮಾಜಿಕ ಸೇವೆ ಮಾಡುತ್ತಿದ್ದು, ಕಳೆದ ಬಾರಿ ವಿಕಲಚೇತನರೊಬ್ಬರಿಗೆ ಶ್ರವಣ ಸಾಧನೆ ವಿತರಿಸಿದರು, ಈ ಬಾರಿ ಅಪಘಾತಗಳಲ್ಲಿ ಆಗುತ್ತಿರುವ ಜೀವ ನಷ್ಟ ತಡೆಯಲು ಹೆಲ್ಮೆಟ್ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಡಾ.ಮನೋಹರ್‌ಗೌಡ ಬಿ.ಜಿ ಮಾತನಾಡಿ, ಪ್ರತಿ ವರ್ಷವೂ ಒಂದಷ್ಟು ಸಾಮಾಜಿಕ ಕಾರ್ಯ ಮಾಡಬೇಕೆಂಬುದು ನನ್ನ ತಾಯಿ ವೀಣಾ ಹಾಗೂ ತಂದೆ ಬ್ಯಾಲಹಳ್ಳಿ ಗೋವಿಂದಗೌಡರ ಆಶಯವಾಗಿದ್ದು, ಅವರೂ ನನ್ನೀ ಕಾರ್ಯಕ್ಕೆ ಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಸ್ಮರಿಸಿದರು.ಹೋದ ಜೀವ ಬದುಕಿಸಲು ಅಸಾಧ್ಯವಾದರೂ ಆ ಅಮೂಲ್ಯ ಜೀವಕ್ಕೆ ಕುತ್ತು ಬರುವುದನ್ನು ತಡೆಯುವ ಸಣ್ಣ ಪ್ರಯತ್ನ ಇದಾಗಿದ್ದು, ಈ ಬಾರಿ ೧೫೦ ಹೆಲ್ಮೆಟ್ ವಿತರಿಸಿದ್ದೇನೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಮಾಜಿಕ ನೆರವು ಒದಗಿಸುವ ಆಶಯ ಹೊಂದಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಾಲಪ್ಪ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ೧೫೦ ಮಂದಿ ಭದ್ರತಾ ನೌಕರರು ಸೇರಿದಂತೆ ಇತರೆ ಸಿಬ್ಬಂದಿಗೆ ಹೆಲ್ಮೆಟ್ ವಿತರಿಸಿದರು.
ಈ ಸಂದರ್ಭದಲ್ಲಿ ಡಾ.ತುಂಗಲಾ ಪವನ್,ಡಾ.ಮೋಹನ್‌ಪೋಕೂರ್, ಡಾ.ಸುನೀಲ್‌ಭಾಗಿ, ಡಾ.ನಾಗ ಕುಮಾರ್,ಡಾ.ಗಗನ್,ಡಾ.ಶಶಾಂಕ್, ಡಾ.ಅಕ್ಷಯ್, ಜಾಲಪ್ಪ ಆಸ್ಪತ್ರೆ ಸಿಬ್ಬಂದಿ ನಾಗರಾಜ್ ಉಪಸ್ಥಿತರಿದ್ದರು.