ಶಾಸಕ ಪ್ರದೀಪ್ ಈಶ್ವರ್ ನಗರ ಪ್ರದಕ್ಷಿಣೆ, ಶೌಚಾಲಯ ನಿರ್ಮಾಣಕ್ಕೆ ಶಂಕು ಸ್ಥಾಪನೆ
ಚಿಕ್ಕಬಳ್ಳಾಪುರ.ಜು೧೩: ಶಾಸಕ ಪ್ರದೀಪ್ ಈಶ್ವರ್ ಏಕಾ ಎಕಿ ನಗರಸಭೆ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ನಡೆಸಿ, ಹಾಳಾಗಿದ್ದ ಮೂರು ರಸ್ತೆ ಗಳಿಗೆ ಡಾಂಬರೀಕರಣ ಕ್ಕೆ ಸಮ್ಮತಿ ಮತ್ತು ಶೌಚಾಲಯ ನಿರ್ಮಾಣಕ್ಕೆ ಧಿಡೀರ್ ಶಂಕು ಸ್ಥಾಪನೆ ನೆರವೇರಿಸಿ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ಸೂಚಿಸಿದರು.
ನಗರ ಪ್ರದಕ್ಷಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾಕೇಂದ್ರವಾದ ಚಿಕ್ಕಬಳ್ಳಾಪುರ ನಗರದಲ್ಲಿ ಸಂಪರ್ಕ ರಸ್ತೆಗಳ ಅಭಿವೃದ್ಧಿ ಆಗಿಲ್ಲ. ನಗರದಿಂದ ನಗರ ಹೊರವಲಯದ ಮುಸ್ಟೂರಿನ ಕೆರೆ ಅಂಚಿನವರೆಗೆ ಇರುವ ರಸ್ತೆಯ ಅಧ್ವಾನವನ್ನು ಕಂಡರೂ ಕೂಡ ಯಾವೊಬ್ಬ ಜನಪ್ರತಿನಿಧಿಯೂ ಸಹ ಕಳೆದ ೮-೧೦ ವರ್ಷಗಳಿಂದ ಸರಿಪಡಿಸುವ ಕೆಲಸ ಮಾಡಿಲ್ಲ. ಈ ರಸ್ತೆಯು ಸುತ್ತ ಮುತ್ತಲಿನ ೩೦ ಕ್ಕೂ ಹೆಚ್ಚಿನ ಹಳ್ಳಿಗಳಿಗೆ ನಗರ ಸಂಪರ್ಕ ರಸ್ತೆಯಾಗಿದ್ದು, ಈಶಾ ಪೌಂದೇಶನ್ ನ ೧೧೨ ಅಡಿಗಳ ಎತ್ತರದ ಆದಿ ಯೋಗಿ ಶಿವನ ಪ್ರತಿಮೆಯ ಬಳಿಗೆ ತೆರಳುವ ಮಾರ್ಗಗಳಲ್ಲಿ ಒಂದಾಗಿದೆ ಎಂದರು.
ನಾನು ಶಾಸಕನಾಗಿ ಆಯ್ಕೆಯಾದ ೧೨ ತಿಂಗಳಲ್ಲಿ ಏನೇನು ಅಭಿವೃದ್ಧಿ ಮಾಡಿದ್ದೇನೆ ಎಂಬುದನ್ನು ದೊಡ್ಡ ದೊಡ್ಡ ಕಟ್ಟಡಗಳನ್ನು ತೋರಿಸಿ ಹೇಳಲಾಗದು. ಸಾರ್ವಜನಿಕರಿಗೆ ಅದರಲ್ಲೂ ಬಡತನ ರೇಖೆಗಿಂತ ಕೆಲಗಿರುವವರಿಗೆ ಮೂಲ ಭೂತ ಸೌಲಭ್ಯ ಕಲ್ಪಿಸಿದ್ದೇನೆ. ಬೇರೆ ಎರಡು ಕ್ಷೇತ್ರಗಳಲ್ಲಿ ಉಳಿಕೆಯಾಗಿದ್ದ ಕೊಳಚೆ ಮಂಡಲಿಯ ಅನುದಾನದ ೩೦೦ ಮನೆಗಳನ್ನು ಚಿಕ್ಕಬಳ್ಲಾಪರ ಕ್ಕೆ ತಂದಿದ್ದೇನೆ. ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ದೂರದೃಷ್ಟಿಯ ನೆರವಿನಲ್ಲಿ ೬ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಇದರಲ್ಲಿ ೧೦ ಕೊಠಡಿ,ಎಡಗಡೆ ಜಿ.ಪ್ಲಸ್ ತ್ರಿ,ನೆಲಮಾಳಿಗೆಯಲ್ಲಿ ಒಂದು ಗ್ರಂಥಾಲಯ,ಜಿಮ್ ಕಟ್ಟಲು ವ್ಯವಸ್ಥೆ ಆಗಿದೆ.ಇದರಂತೆ ನಗರದ ಹೊರವಲಯದಲ್ಲಿರುವ ಮಹಿಳಾ ಕಾಲೇಜು ಅಭಿವೃದ್ಧಿಗೆ ೪ ಕೋಟಿ ಅನುದಾನ ಬಿಡುಗಡೆ ಆಗಿದೆ.ನಮ್ಮ ಉದ್ದೇಶ ಸರ್ಕಾರಿ ಕಾಲೇಜುಗಳನ್ನು ಹೈಟೆಕ್ ಆಗಿ ರೂಪಿಸುವುದೇ ಆಗಿದೆ ಎಂದರು.
ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಗೆ ತಿರುಗೇಟು ಕೊಟ್ಟ ಶಾಸಕ:
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಚಿಂತಾಮಣಿಗೆ ಸರ್ಕಾರಿ ಇಂಜನಿಯರಿಂಗ್ ಕಾಲೇಜು ತಂದಿದ್ದು ಈ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಿಸಲಿದೆ. ಅಭಿವೃದ್ದಿಯನ್ನು ಹೇಳದೇ ಮಾಡುತ್ತಿರುವ ಸಚಿವ ಡಾ.ಎಂ.ಸಿ.ಸುಧಾಕರ್ ರವರ ಮೇಲೆ ಬುಧವಾರ ಪ್ರತಿಭಟನೆಯ ವೇಳೆ ತಲೆ ತಲೆ ಚಚ್ಚಿಕೊಂಡು ಟೀಕೆ ಮಾಡಿರುವ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅರ್ಥಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಈ ವೇಳೆ ನಗರಸಭೆ ಉಸ್ತುವಾರಿ ಪೌರಾಯುಕ್ತ ಹಾಗೂ ಪರಿಸರ ಅಭಿಯಂತರ ಉಮಾಶಂಕರ್, ಮತ್ತು ನಗರಸಭೆ ಅಧಿಕಾರಿಗಳು, ಮುಖಂಡರಾದ ಪಿ.ಎಂ. ರಘು ವಿನಯ್ ಬಂಗಾರಿ, ಡ್ಯಾನ್ಸ್ ಶ್ರೀನಿವಾಸ್, ನಾಗಭೂಷಣ್, ಪೆದ್ದಣ್ಣ, ನಾರಾಯಣಮ್ಮ, ಮಂಗಳಾಪ್ರಕಾಶ್,ಷಾಹೀದ್,ಅಲ್ಲು ಅನಿಲ್, ಮತ್ತಿತರರು ಇದ್ದರು.