ಸಚಿವರಿಂದ ವಿಕಲಚೇತನ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
ಚಿಕ್ಕಬಳ್ಳಾಪುರ.ಜು೧೩: ಸಮಾಜದಲ್ಲಿ ಸಹಜ ಜೀವನ ನಡೆಸಲು ಕಷ್ಟವಿರುವ ವಿಶೇಷಚೇತನರಿಗೆ ಸೌಲಭ್ಯಗಳನ್ನು ಮೊದಲ ಆದ್ಯತೆಯಾಗಿ ನೀಡಲು ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮನವಿ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ವಿಶೇಷಚೇತನ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.
ವಿಶೇಷಚೇತನರು ತಮ್ಮದಲ್ಲದ ತಪ್ಪಿಗೆ ಇತರರಂತೆ ಸಹಜ ಜೀವನ ನಡೆಸಲು ಸಾಧ್ಯವಾಗದೇ ಕಷ್ಟಪಡುತ್ತಾರೆ. ಅದ್ದರಿಂದ ಅವರಿಗೆ ಮೊದಲ ಆದ್ಯತೆಯಲ್ಲಿ ಸೌಲಭ್ಯ ಮತ್ತು ಅವಕಾಶಗಳನ್ನು ಸಮಾಜ ಮತ್ತು ಸರ್ಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಸೌಲಭ್ಯ ಮಂಜೂರಾದ ಫಲಾನುಭವಿಗಳಿಗೆ ೮೪ ದ್ವಿಚಕ್ರವಾಹನ, ೧೫ ಬ್ಯಾಟರಿ ಚಾಲಿತ ಗಾಲಿ ಕುರ್ಚಿ, ೦೪ ಟಾಕಿಂಗ್ ಲ್ಯಾಪ್ ಟಾಪ್, ೧೪ ಹೊಲಿಗೆ ಯಂತ್ರ ಹಾಗೂ ೧೬ ಸಾಧನ ಸಲಕರಣೆಗಳು ಸೇರಿ ಒಟ್ಟು ೧,೦೪,೩೮೦೦೦ ರೂಪಾಯಿ ಮೌಲ್ಯದ ಸಲಕರಣೆ ಸೌಲಭ್ಯಗಳನ್ನು ೧೩೩ ಫಲಾನುಭವಿಗಳಿಗೆ ವಿತರಿಸಲಾಯಿತು.
ಈ ವರ್ಷದ ಶಾಸಕರ ನಿಧಿಯಲ್ಲಿ ಲಭ್ಯವಿರುವ ೨ ಕೋಟಿ ರೂಪಾಯಿ ಅನುದಾನವನ್ನು ಸಂಪೂರ್ಣವಾಗಿ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ವಾಹನ ಖರೀದಿಸಲು ಮೀಸಲಿಡುವುದಾಗಿ ಸಚಿವರು ಈ ವೇಳೆ ತಿಳಿಸಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್, ವಿಧಾನ ಪರಿಷತ್ತಿನ ಸದಸ್ಯರಾದ ಅನಿಲ್ ಕುಮಾರ್, ಡಿ.ಟಿ. ಶ್ರೀನಿವಾಸ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್, ತಹಶೀಲ್ದಾರ್ ಅನಿಲ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಫಲಾನುಭವಿಗಳು ಉಪಸ್ಥಿತರಿದ್ದರು.