ಡೆಂಗ್ಯೂ ನಿಯಂತ್ರಣಕ್ಕೆ ಅಧಿಕಾರಿಗಳ ತಂಡ ನಿಯೋಜಿಸಿ
ಚಿಕ್ಕಬಳ್ಳಾಪುರ, ಜುಲೈ ೧೩: ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚು ಆಗುವ ಸಂಭವ ಇದ್ದು, ಡೆಂಗ್ಯೂ ಜ್ವರ ಉಲ್ಬಣ ಆಗುವ ಸಾಧ್ಯತೆ ಇದೆ. ಆದ್ದರಿಂದ ಈಗಿನಿಂದಲೆ ಡೆಂಗ್ಯೂ ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ.ಸುಧಾಕರ್ ಅವರು ತಿಳಿಸಿದರು.
ಇಲ್ಲಿನ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ೨೦೨೩-೨೪ನೇ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಮುನ್ಸೂಚನೆಯ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ಜ್ವರ ಮತ್ತಷ್ಟು ಉಲ್ಬಣ ಆಗಲಿರುವ ಸಾಧ್ಯತೆ ಇರುವುದರಿಂದ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮವನ್ನು ವಾರ್ಡ್ ಮತ್ತು ಗ್ರಾಮ ಮಟ್ಟದಲ್ಲಿ ಆಂದೋಲನದ ರೀತಿ ಕೈಗೊಳ್ಳಬೇಕಾಗಿರುವುದರಿಂದ ನಿಗಾವಹಿಸಲು ಅಧಿಕಾರಿಗಳ ತಂಡವನ್ನು ನಿಯೋಜಿಸಬೇಕು. ಸಮುದಾಯದೊಂದಿಗೆ ಸೇರಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು. ಸೊಳ್ಳೆ ನಿರೋದಕ ಗಳನ್ನು ಬಳಸುವುದು. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಡೆಂಗ್ಯೂ ಹೆಚ್ಚಾಗದಂತೆ ಕ್ರಮ ವಹಿಸಬೇಕು. ಸ್ಥಳೀಯ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಣ, ಕಾರ್ಮಿಕ ಇಲಾಖೆ, ಪಂಚಾಯತ್ ರಾಜ್ ಇಲಾಖೆಯವರ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಲಾರ್ವ ಸಮೀಕ್ಷೆ ಕೈಗೊಂಡು ಸೊಳ್ಳೆಗಳ ನಿಯಂತ್ರಣಕ್ಕೆ ಪ್ರತಿನಿತ್ಯ ನಿಗಾವಹಿಸಬೇಕು. ಡೆಂಗ್ಯೂ ದೃಢ ಆಗಿರುವ ಪ್ರಕರಣಗಳಲ್ಲಿ ಸಾವು ಸಂಭವಿಸದಂತೆ ನಿಗಾವಹಿಸಿ ಸೂಕ್ತ ಆರೋಗ್ಯ ಚಿಕಿತ್ಸಾ ಕಾರ್ಯಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಸಚಿವರು ನೀಡಿದರು.
ಜೂನ್ ಮಾಹೆಯಲ್ಲಿ ೩೧ ಡೆಂಗ್ಯೂ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದವು. ಜುಲೈ ೯ಕ್ಕೆ ೧೦೧ ಪ್ರಕರಣಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಈ ಪ್ರಕರಣಗಳು ಹೆಚ್ಚಾಗದಂತೆ ಸ್ವಚ್ಛತೆಯ ಮುನ್ನೆಚ್ಚರಿಕೆ ಕ್ರಮಗಳು ಕೈಗೊಳ್ಳಬೇಕು. ಜೊತೆಗೆ ಜಿಲ್ಲೆಯಾದ್ಯಂತ ಸಂಚಾರಿ ಎಲ್.ಇ.ಡಿ. ವಾಹನಗಳಲ್ಲಿ ಡೆಂಗ್ಯೂ ಜ್ವರದ ತೀವ್ರತೆಯ ದುಷ್ಪರಿಣಾಮಗಳು ಹಾಗೂ ಸೊಳ್ಳೆ ನಿಯಂತ್ರಣಗಳ ಕುರಿತು ಅರಿವು ಮೂಡಿಸಲು ಕ್ರಮ ಕೈಗೊಳ್ಳಬೆಕು. ಅದರಲ್ಲೂ ನಗರ ಪ್ರದೇಶಗಳ ಕೊಳಗೇರಿಗಳಲ್ಲಿ ಹೆಚ್ಚು ಅರಿವು ಮಾಡಿಸುವ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಪ್ರಸ್ತುತ ಡೆಂಗ್ಯೂ ಪ್ರಕರಣಗಳು ತಾಲ್ಲೂಕುವಾರು ವಿವರ (ಜುಲೈ ೯ಕ್ಕೆ) ಚಿಕ್ಕಬಳ್ಳಾಪುರ ೨೮, ಶಿಡ್ಲಘಟ್ಟ ೨೪, ಚಿಂತಾಮಣಿ ೧೭, ಬಾಗೇಪಲ್ಲಿ ೧೬, ಗೌರಿಬಿದನೂರು ೧೨, ಗುಡಿಬಂಡೆ ೪ ಪ್ರಕರಣಗಳು ದಾಖಲಾಗಿವೆ.