ಕಳಪೆ ಗುಣಮಟ್ಟದ ಪಶು ಆಹಾರ: ಹಾಲು ಉತ್ಪಾದನೆ ಕುಂಠಿತ
ತಿಪಟೂರು, ಜು. ೧೩- ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕರ್ನಾಟಕ ರಾಜ್ಯ ಹಾಲು ಮಹಾ ಮಂಡಳಿಯಿಂದ ವಿತರಿಸುವ ಪಶು ಆಹಾರವು ಕಳಪೆ ಗುಣಮಟ್ಟದಿಂದ ಕೂಡಿದ್ದು, ಯಾವುದೇ ಪೋಷಕಾಂಶಗಳಿಲ್ಲದೆ ಇರುವುದರಿಂದ ಹಾಲು ಉತ್ಪಾದನೆಯಲ್ಲಿ ಕುಂಠಿತಗೊಂಡಿದೆ ಎಂದು ರೈತರು ಆರೋಪಿಸಿದ್ದಾರೆ.
ಗಂಟು ಕಟ್ಟಿದ ಹಾಗೂ ಕೆಟ್ಟ ವಾಸನೆ ಬರುತ್ತಿರುವ ಪಶು ಆಹಾರವನ್ನು ಹಾಲು ಉತ್ಪಾದಕರಿಗೆ ಹೊನ್ನೇನಹಳ್ಳಿ ಹಾಲು ಉತ್ಪಾದಕರ ಸಹಕಾರದಲ್ಲಿ ನೀಡಿದ್ದು, ರೈತರು ಪಶು ಆಹಾರವನ್ನು ವಾಪಸ್ಸು ಮಾಡಿ ಬೇರೆ ಪಶು ಆಹಾರದ ಚೀಲವನ್ನು ಪಡೆದಿದ್ದಾರೆ.
ಕೆಎಂಎಫ್ ವತಿಯಿಂದ ಸಹಕಾರ ಸಂಘಗಳ ಮೂಲಕ ರೈತರಿಗೆ ಹಾಗೂ ಹಾಲು ಉತ್ಪಾದಕರಿಗೆ ವಿತರಣೆಯಾಗುವ ಪಶು ಆಹಾರವು ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ ಎಂದು ತಿಳಿದು, ಸಂಘಗಳ ಮೂಲಕ ರೈತರು ಖರೀದಿಸಿ ಹಾಲು ಉತ್ಪಾದನೆಯಲ್ಲಿ ಹೆಚ್ಚಳ ಕಾಣಲು ಬಯಸಿದ್ದಾರೆ ಎಂದು ರೈತರು ಹೇಳಿದ್ದಾರೆ.
ಗಂಟು ಕಟ್ಟಿದ ಗಬ್ಬು ವಾಸನೆ ಬರುವ ಪಶು ಆಹಾರದಿಂದ ಹಾಲು ಉತ್ಪಾದನೆಯಲ್ಲಿ ಕುಂಠಿತಗೊಳ್ಳುತ್ತದೆ. ಜೂನ್ ೨೧ ರಿಂದ ಪ್ರಸ್ತುತ ೪.೦ ಪ್ಯಾಟ್, ೮.೫ ಎಸ್‌ಎನ್‌ಎಫ್ ಇರುವ ಒಂದು ಲೀಟರ್ ಹಾಲಿನ ಬೆಲೆ ೩೧ ರೂಪಾಯಿಯಿದ್ದು, ೫೦ ಕೆಜಿಯ ನಂದಿನಿ ಪಶು ಆಹಾರವು ೧,೨೨೮ ರೂಪಾಯಿಗಳಾಗಿದ್ದು ಪ್ರತಿ ಕೆಜಿಗೆ ೨೪.೫೬ ಗಳಾಗಿದೆ.
ಪಶು ಆಹಾರವು ಮೆಕ್ಕೆಜೋಳ, ಭತ್ತದ ತೌಡು, ಧಾನ್ಯಗಳು, ಇಂಡಿ, ಕಾಕಂಬಿ, ಖನಿಜ ಮಿಶ್ರಣಗಳನ್ನು ಮಾಡಿ ಮಾಡಲಾಗುತ್ತಿದ್ದು ಕಳೆದ ಆರೇಳು ತಿಂಗಳಿಂದ ಗುಣಮಟ್ಟದಲ್ಲಿ ವ್ಯತ್ಯಯವಾಗಿರುವುದು ಕಂಡು ಬಂದಿದೆ ಎಂದು ದೂರಿದ್ದಾರೆ.
ಹಸುಗಳು ಇಷ್ಟಪಟ್ಟು ತಿನ್ನುತ್ತಿದ್ದ ಪಶು ಆಹಾರವನ್ನು ತಿರಸ್ಕರಿಸುತ್ತಿರುವುದು ರೈತರಿಗೆ ತಲೆನೋವು ತರಿಸಿದೆ.
ಕೆ.ಎಂ.ಎಫ್ ಹಾಗೂ ತುಮಕೂರು ಹಾಲು ಒಕ್ಕೂಟದಿಂದ ನೀಡಲಾಗಿರುವ ಪಶು ಆಹಾರವು ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನ ಹಲವು ಡೇರಿಗಳಲ್ಲಿ ಕಳಪೆ ಗುಣಮಟ್ಟದ ಪಶು ಆಹಾರವನ್ನು ನೀಡಿರುವ ವರದಿಗಳು ಬೆಳಕಿಗೆ ಬಂದಿದ್ದು ಕಸಬಾ ಹೋಬಳಿಯ ಮತ್ತಿಹಳ್ಳಿ, ಹಾಗೂ ಹರಚನಹಳ್ಳಿ, ಹೊನ್ನೇನಹಳ್ಳಿ ಸಂಘಗಳು ಸೇರಿದಂತೆ ಇನ್ನೂ ಕೆಲವು ಸಂಘಗಳಲ್ಲಿ ಕಂಡು ಬಂದಿದೆ.
ಕಳೆದ ೬-೭ ತಿಂಗಳುಗಳಿಂದ ರೈತರಿಂದ ಆಯ್ಕೆಯಾಗಿರುವ ಆಡಳಿತ ಮಂಡಳಿ ಇಲ್ಲದೆ ಇದ್ದು, ಅಧಿಕಾರಿಗಳು ಆಡಳಿತ ಮಾಡುತ್ತಿದ್ದಾರೆ. ಒಕ್ಕೂಟದಿಂದ ಆಗೊಮ್ಮೆ ಈಗೊಮ್ಮೆ ಹಾಲಿನ ಗುಣಮಟ್ಟದಲ್ಲಿ ವ್ಯತ್ಯಾಸ ಮಾಡುತ್ತಾ ದಿನದಿಂದ ದಿನಕ್ಕೆ ಹಾಲಿನ ದರವು ಕಡಿಮೆಗೊಳಿಸುತ್ತಾ, ಪಶು ಆಹಾರದ ದರವನ್ನು ದಿನದಿಂದ ದಿನಕ್ಕೆ ಹೆಚ್ಚಳ ಮಾಡಿ ರೈತರಿಗೆ ಒಂದಲ್ಲ ಒಂದು ತೊಂದರೆಗಳನ್ನು ಕೆಎಂಎಫ್ ಅಧಿಕಾರಿಗಳು ನೀಡುತ್ತಾ ಬರುತ್ತಿದ್ದಾರೆ ಎಂದು ತಾಲ್ಲೂಕಿನ ರೈತರು ಆರೋಪಿಸಿದ್ದಾರೆ.
ಈಗಲಾದರೂ ಎಚ್ಚೆತ್ತು ಅಧಿಕಾರಿಗಳು ಪಶು ಆಹಾರದ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಿ ಗುಣಮಟ್ಟದ ಪಶು ಆಹಾರವನ್ನು ನಿಡುವಂತಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಹೊನ್ನೇನಹಳ್ಳಿ, ಡೇರಿ ಉತ್ಪಾದಕರು ಸಂಘದಿಂದ ಪಶು ಆಹಾರವನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ನೋಡಿದಾಗ ಗಂಟು ಕಟ್ಟಿದ್ದು ಹಾಗೂ ಗಬ್ಬು ವಾಸನೆ ಬರುತ್ತಿರುವ ಬಗ್ಗೆ ತಿಳಿದಾಗ ವಾಪಸ್ ಪಡೆದಿದ್ದು, ಗಂಟು ಕಟ್ಟಿರುವ ಪಶು ಆಹಾರದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹೊನ್ನೇನಹಳ್ಳಿ ಕಾರ್ಯದರ್ಶಿ ಪ್ರೇಮಾ ತಿಳಿಸಿದ್ದಾರೆ.