ಮುಡಾ ಹಗರಣ: ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ
ತುಮಕೂರು, ಜು. ೧೩- ಮುಡಾದಲ್ಲಿ ನಡೆದಿರುವ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಭಾಗಿಯಾಗಿರುವ ಸಾಧ್ಯತೆಗಳಿದ್ದು, ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನಿಡಬೇಕು ಎಂದು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಒತ್ತಾಯಿಸಿದರು.
ಮುಡಾ ಹಗರಣದ ಹಿಂದೆ ದೊಡ್ಡ ಜಾಲವಿದೆ. ಎಲ್ಲರೂ ಗ್ಯಾಂಗ್ ಮಾಡಿಕೊಂಡು ಹಗರಣ ಮಾಡಿದ್ದಾರೆ. ರಾಜ್ಯ ಪೊಲೀಸರು ಈ ಹಗರಣವನ್ನು ಮುಚ್ಚಿ ಹಾಕಲಿದ್ದಾರೆ. ಏಕೆಂದರೆ ಮುಖ್ಯಮಂತ್ರಿ ವಿರುದ್ಧವೇ ತನಿಖೆ ಮಾಡಿ ಅವರನ್ನು ಆರೋಪಿ ಮಾಡುವಂಥಾ ಸಾಹಸವನ್ನು ರಾಜ್ಯ ಪೊಲೀಸರು ಮಾಡಲು ಸಾಧವಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಇದು ಸಣ್ಣಪುಟ್ಟ ಹಗರಣವಲ್ಲ, ಇಲ್ಲಿ ೫,೦೦೦ ಕೋಟಿ ರೂ.ಗಳಿಗಿಂತ ಹೆಚ್ಚಿನ ಅಕ್ರಮವಾಗಿದೆ. ಇದರಲ್ಲಿ ಮುಖ್ಯಮಂತ್ರಿಯವರ ಪತ್ನಿ ಪಾರ್ವತಮ್ಮ ಅವರೂ ನೇರವಾಗಿ ಪಾಲುದಾರರು. ಮುಖ್ಯಮಂತ್ರಿಯವರ ಆದೇಶವಿಲ್ಲದೆ ಇದು ಆಗುವುದಿಲ್ಲ ಎಂದು ದೂರಿದರು.
೧೯೯೨ರಲ್ಲಿ ಭೂಮಿ ವಶಕ್ಕೆ ಪಡೆಯುವ ಕೆಲಸವನ್ನು ಮುಡಾ ಶುರು ಮಾಡಿದೆ. ಆದರೆ ೨೦೦೪ರಲ್ಲಿ ಪಾರ್ವತಮ್ಮ ಅವರ ಸೋದರ ಭೂಮಿ ಖರೀದಿ ಮಾಡಿದ್ದಾರೆ. ಮುಡಾ ಸ್ವಾದೀನದಲ್ಲಿದ್ದ ಜಾಗವನ್ನು ಅವರು ಹೇಗೆ ಖರೀದಿ ಮಾಡಿದರು ಎಂದು ಪ್ರಶ್ನಿಸಿದರು.
ಒಂದೊಂದು ನಿವೇಶನದ ಬೆಲೆ ೨ ಕೊಟಿ ರೂಪಾಯಿ ಮೀರುತ್ತದೆ. ೬೫ ಕೋಟಿ ರೂಪಾಯಿಗಳ ನಿವೇಶನ ಬೇಕು ಎಂದು ಸಮಾಜವಾದಿಯಾದ ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಇದು ಹಗಲು ದರೋಡೆಯಲ್ಲವೆ? ಈ ಆಸ್ತಿಯ ವಿಚಾರವಾಗಿ ಮುಖ್ಯಮಂತ್ರಿಗಳು ೨೦೧೩ರಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ತಮ್ಮ ಆಸ್ತಿ ದಾಖಲಾತಿಯಲ್ಲಿ ಉಲ್ಲೇಖಿಸಿಲ್ಲ. ಈ ವಿಚಾರವಾಗಿ ಚುನಾವಣಾ ಆಯೋಗದ ಗಮನಕ್ಕೆ ತರಲು ರಾಜ್ಯ ಬಿಜೆಪಿ ಆಲೋಚನೆ ಮಾಡುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಅರ್ಜಿ ಸಲ್ಲಿಸಿದ ನಂತರ ಮುಡಾ ಅಧ್ಯಕ್ಷ ಮತ್ತು ಆಯುಕ್ತರು ೫೦:೫೦ ಅನುಪಾತದಲ್ಲಿ ನಿವೇಶನ ಮಾಡಿದ್ದಾರೆ. ಇದರಿಂದ ಮುಡಾಗೆ ನಷ್ಟವಾಗಿದೆ. ೫೦:೫೦ ಅನುಪಾತದಲ್ಲಿ ಹಂಚಿಕೆ ಮಾಡುವುದಾದರೆ ಸರ್ಕಾರಕ್ಕೆ ಕಳುಹಿಸಿ ಒಪ್ಪಿಗೆ ಪಡೆದು ಆದೇಶವಾಗಬೇಕು. ಆದರೆ, ಇಲ್ಲಿ ಅಕ್ರಮವಾಗಿ ಅವರೇ ಹಂಚಿಕೆ ಮಾಡಿದ್ದಾರೆ ಎಂದರು.
ಉದಾಹರಣೆ ಕೊಡಬೇಕು ಎಂದರೆ, ಬೆಂಗಳೂರಿನ ದಾಸರಹಳ್ಳಿಯಲ್ಲಿ ಭೂಸ್ವಾಧೀನವಾದರೆ ಎಂ.ಜಿ.ರಸ್ತೆಯಲ್ಲಿ ಜಮೀನು ಕೊಟ್ಟಂತಾಗಿದೆ. ಈ ಹಗರಣದ ತನಿಖೆಯನ್ನು ಸರ್ಕಾರದಡಿಯ ಸಂಸ್ಥೆಗೆ ನೀಡಿದರೆ ಮುಖ್ಯಮಂತ್ರಿಯನ್ನು ಆರೋಪಿ ಮಾಡಲು ಸಾಧ್ಯವಿಲ್ಲ. ಆದ್ಧರಿಂದ ಸಿಬಿಐಗೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಡಿನೋಟಿಫೈ ಆದ ಭೂಮಿಯ ಬದಲಿಗೆ ಪ್ರತಿಷ್ಠಿತ ಸ್ಥಳದಲ್ಲಿ ನಿವೇಶನ ನೀಡಲಾಗಿದೆ. ಡಿನೋಟಿಫೈ ಆದ ಜಮೀನನ್ನು ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಭೂ ಮಾಲೀಕರು ಅದನ್ನು ನೋಡಿಕೊಂಡು ಏಕೆ ಸುಮ್ಮನಿದ್ದರು ಎಂದು ಅನುಮಾನ ಬರುತ್ತಿದೆ. ಈ ವಹಿವಾಟಿನಿಂದ ಸರ್ಕಾರಕ್ಕೆ ಸಾವಿರಾರು ಕೊಟಿ ರೂ.ಗಳ ನಷ್ಟವಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ ಎಲ್ಲರೂ ಗ್ಯಾಂಗ್ ಸೇರಿಕೊಂಡು ಹಗರಣ ಮಾಡಿದ್ದಾರೆ. ಮುಖ್ಯಮಂತ್ರಿಗಳ ಆಪ್ತರಾದ ಸಚಿವ ಭೈರತಿ ಸುರೇಶ್ ಅವರು ಹಗರಣ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ದಾಖಲೆಗಳನ್ನು ಮಾಯ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಅವಕಾಶವಾಗದಂತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ರಾಜ್ಯ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್‌ಗೌಡ, ಹಾಲೇಗೌಡ, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಮಾಧ್ಯಮ ಪ್ರಮುಖ್ ಜೆ. ಜಗದೀಶ್, ಕಾರ್ಯಾಲಯ ಕಾರ್ಯದರ್ಶಿ ಗಣೇಶ್ ಪ್ರಸಾದ್, ಜಿ.ಎಸ್. ನಂದಿನಾಥ್ ಮತ್ತಿತರರು ಉಪಸ್ಥಿತರಿದ್ದರು.