ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಟಿಎಂ ಉದ್ಘಾಟನೆ
ತಿಪಟೂರು, ಜು. ೧೩- ಗ್ರಾಮೀಣ ರೈತರ ಅನುಕೂಲಕ್ಕಾಗಿ ಡಿಸಿಸಿ ಬ್ಯಾಂಕ್‌ನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರು ಹಾಗೂ ಸದಸ್ಯರ ಅನುಕೂಲಕ್ಕಾಗಿ ಎಟಿಎಂ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ನಗರದ ಗೊರಗೊಂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಎಟಿಎಂ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನ ಕೃಷಿ ಪತ್ತಿನ ಸಹಕಾರ ಸಂಘದ ಪ್ರಥಮ ಎಟಿಎಂ ಕೇಂದ್ರ ಇದಾಗಿದ್ದು, ಈ ಸಹಕಾರಿ ಪ್ರಾರಂಭಗೊಂಡು ೧೧೪ ವರ್ಷಗಳಾಗಿದ್ದು ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಪ್ರತಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಎಟಿಎಂ ಕೇಂದ್ರ ಪ್ರಾರಂಭಿಸಲಾಗುವುದು. ಇದರಿಂದ ರೈತರು ನಗರ ಪ್ರದೇಶಗಳಿಗೆ ಬಂದು ಹೋಗುವ ಸಮಯ ಉಳಿತಾಯವಾಗಲಿದೆ ಎಂದರು.
ಸಹಕಾರ ಸಂಘದ ಸದಸ್ಯರು, ರೈತರು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದ ಅವರು, ಇಲ್ಲಿನ ಗಾಂಧಿನಗರ ಭಾಗದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಎಟಿಎಂ ಕೇಂದ್ರ ಪ್ರಾರಂಭಿಸಲಾಗುವುದು ಇದರಿಂದ ಆ ಭಾಗದ ಜನರಿಗೆ ಅನುಕೂಲವಾಗಲಿದ್ದು ಬಹುದಿನಗಳ ಕನಸನ್ನು ಈಡೇರಿಸಿದಂತಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷೆ ಕಲಾವತಿ, ನಿರ್ದೇಶಕರಾದ ಜಿ.ಎಲ್. ಸುದರ್ಶನ್, ಎಂ.ಸಿ. ಮಂಜುನಾಥ್, ಸುರೇಶ್, ಶಿವಯ್ಯ, ಗೋಪಾಲಯ್ಯ, ದೇವರಾಜ್, ನಾಗರಾಜ್, ಮಹಾಲಿಂಗಪ್ಪ, ಲತಮ್ಮ, ನಗರಸಭೆ ಸದಸ್ಯೆ ಪದ್ಮ ತಿಮ್ಮೇಗೌಡ, ಕರಡಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ದೇವರಾಜು, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಉಮಾಶಂಕರ್, ಸಹಕಾರ ಸಂಘದ ಕಾರ್ಯದರ್ಶಿ ಪ್ರವೀಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.