ಬಲವಂತವಾಗಿ ರೈತರ ಜಮೀನಿನಲ್ಲಿ ಕೆಪಿಟಿಸಿಎಲ್ ಟವರ್ ನಿರ್ಮಾಣ: ಆರೋಪ
ಹುಳಿಯಾರು, ಜು. ೧೩- ರೈತರ ಭೂಮಿಗೆ ಪರಿಹಾರ ನೀಡದೆ ಹಂದನಕೆರೆ ಹೋಬಳಿ ಮತಿಘಟ್ಟ, ಮಲ್ಲಿಗೆರೆ ಗ್ರಾಮಗಳಲ್ಲಿ ಪೊಲೀಸ್ ಸಂರಕ್ಷಣೆಯಲ್ಲಿ ಬಲವಂತವಾಗಿ ರೈತರ ಜಮೀನುಗಳನ್ನು ವಶಪಡಿಸಿಕೊಂಡು ಕೆಪಿಟಿಸಿಎಲ್ ಟವರ್ ನಿರ್ಮಾಣ ಕಾಮಗಾರಿ ಹೊಂಡಗಳನ್ನು ತೋಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಕೋಟ್ಯಂತರ ರೂ. ವೆಚ್ಚದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ನಿರ್ಮಿಸುತ್ತಿರುವ ಹಂದನಕೆರೆ ಉಪ-ಸ್ಥಾವರದಿಂದ ಮತಿಘಟ್ಟ ಸ್ಥಾವರದವರೆಗಿನ ೭.೭ ಕಿ.ಮೀ. ಉದ್ದದ ಲೈನ್ ಅಳವಡಿಸಲು ಟವರ್‌ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ೭.೭ ಕಿ.ಮೀ.ವರೆಗೂ ಲೈನ್ ಅಳವಡಿಕೆಗೆ ೩೦೦ ಮೀಟರ್ ಅಂತರದಲ್ಲಿ ಒಂದೊಂದು ಟವರ್‌ನಂತೆ ಒಟ್ಟು ೩೧ ಟವರ್‌ಗಳನ್ನು ನಿರ್ಮಿಸಬೇಕಿದೆ. ಆದರೆ, ಯಾವ ರೈತರಿಗೂ ಇಲ್ಲಿಯವರೆವಿಗೆ ನಯಾಪೈಸೆಯ ಪರಿಹಾರವನ್ನೂ ನೀಡದೆ ಕೆಪಿಟಿಸಿಎಲ್ ಬಲವಂತವಾಗಿ ರೈತರ ಜಮೀನನ್ನು ವಶಪಡಿಸಿಕೊಳ್ಳುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಬಲವಂತವಾಗಿ ಟವರ್ ನಿರ್ಮಿಸುತ್ತಿರುವ ಬಗ್ಗೆ ರೈತರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಪ್ರಕರಣ ಇನ್ನೂ ಇತ್ಯರ್ಥಗೊಂಡಿಲ್ಲ. ಜುಲೈ ೧೯ ರಂದು ಕೋರ್ಟಿನ ತೀರ್ಪು ಬರಲಿದೆ. ಇಲಾಖೆಯ ಅಧಿಕಾರಿಗಳು ಕಡೇ ಪಕ್ಷ ಅಲ್ಲಿಯವರೆಗೂ ಕಾಯದೇ ಹೀಗೆ ಏಕಾಏಕಿ ರೈತರ ಜಮೀನಿನ ಮೇಲೆ ದಾಳಿ ಮಾಡಿ ಪೊಲೀಸ್ ಬಲ ಪ್ರಯೋಗಿಸಿ, ಉತ್ತಮ ಇಳುವರಿಯ ಮುಂಗಾರು ಬೆಳೆ ಬೆಳೆದಿರುವ ಜಮೀನಿನ ಮೇಲೆ ಜೆಸಿಬಿ-ಬುಲ್ಡೋಜರ್ ನುಗ್ಗಿಸಿ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಈ ರೀತಿಯಾದರೆ ರೈತ ಆತ್ಮಹತ್ಯೆ ಮಾಡಿಕೊಳ್ಳದೆ ಇನ್ನೇನು ಮಾಡಬೇಕು ಹೇಳಿ ಎಂದು ಮಲ್ಲಿಗೆರೆ ಗ್ರಾಮದ ರೈತ ಮಹಿಳೆ ರಾಜಮ್ಮ ಹಾಗೂ ಸಹೋದರ ಪ್ರಶ್ನಿಸಿದರು.
ನ್ಯಾಯಾಲಯದ ತಡೆಯಾಜ್ಞೆ ತೆರವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಪೊಲೀಸ್ ಭದ್ರತೆ ಜತೆಗೆ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಭೂಮಿ ಕಳೆದುಕೊಂಡ ರೈತರಿಗೆ ನೀಡಬೇಕಾದ ಪರಿಹಾರವನ್ನು ಮೊದಲು ನೀಡಿ ಎಂದು ಜಿಲ್ಲಾಧಿಕಾರಿಗಳು ಯಾಕೆ ಸೂಚನೆ ನೀಡುತ್ತಿಲ್ಲ, ಜಿಲ್ಲಾಧಿಕಾರಿಗಳು ರೈತರ ಪರವಾಗಿ ಇರಬೇಕಿತ್ತು. ಆದರೆ, ಅವರು ರೈತ ವಿರೋಧಿ ನಿರ್ಣಯಗಳನ್ನು ತಾಳುತ್ತಿದ್ದಾರೆ. ಅವರು ರೈತರ ಅಹವಾಲನ್ನು ಕೇಳಿ ತಿಳಿದು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಸಂತ್ರಸ್ತ ರೈತ ಯೋಗೇಶ್ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದನ್ವಯ ಕೆಪಿಟಿಸಿಎಲ್ ಟವರ್ ನಿರ್ಮಾಣ ಕಾಮಗಾರಿ ಜಾಗದಲ್ಲಿ ಸೂಕ್ತ ಭದ್ರತೆ ಕಲ್ಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಇಲ್ಲಿ ಯಾವುದೇ ದೌರ್ಜನ್ಯ, ದಬ್ಬಾಳಿಕೆ ಮಾಡುವ, ಧಮಕಿ ಹಾಕುವ, ಬೆದರಿಸುವ ಕೆಲಸವನ್ನು ಪೊಲೀಸರು ಮಾಡುತ್ತಿಲ್ಲ. ರೈತರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಚಿಕ್ಕನಾಯಕನಹಳ್ಳಿ ವೃತ್ತ ನಿರೀಕ್ಷಕ ನದಾಫ್ ತಿಳಿಸಿದ್ದಾರೆ.