ಡೆಂಗ್ಯೂ-ಚಿಕೂನ್ ಗುನ್ಯಾ ಪ್ರಕರಣ ಹೆಚ್ಚಳ: ಸ್ವಚ್ಛತೆ ಕಾಪಾಡಲು ಸೂಚನೆ
ಹುಳಿಯಾರು, ಜು. ೧೩- ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ಡೆಂಗ್ಯೂ, ಚಿಕೂನ್‌ಗುನ್ಯಾದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಮನೆ ಒಳಗೆ ಮತ್ತು ಸುತ್ತಮುತ್ತಲ ಪರಿಸರದಲ್ಲಿ ನೀರು ನಿಲ್ಲದಂತೆ ಜಾಗೃತಿ ವಹಿಸಿ ಎಂದು ಹುಳಿಯಾರಿನ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಸಿ.ರೇಣುಕರಾಜು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಿರಾಶ್ರಿತ ಮಹಿಳೆಯರ ಚಾರಿಟೇಬಲ್ ಟ್ರಸ್ಟ್ ಹಾಗೂ ಸೃಜನಾ ವೇದಿಕೆ ವತಿಯಿಂದ ಏರ್ಪಡಿಸಿದ್ದ ಡೆಂಗ್ಯೂ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಳೆ ಆರಂಭವಾಗಿರುವುದರಿಂದ ಸೊಳ್ಳೆಗಳ ಉತ್ಪಾದನೆ ಅಧಿಕವಾಗಿ ಡೆಂಗ್ಯೂ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸೊಳ್ಳೆಗಳನ್ನು ನಾಶ ಮಾಡಲು ಕೀಟನಾಶಕ ಸಿಂಪಡಿಸಿ, ದಿನನಿತ್ಯ ಸೊಳ್ಳೆ ಪರದೆಯನ್ನು ಉಪಯೋಗಿಸುವುದರಿಂದ ಮಾರಕ ರೋಗಗಳಿಂದ ರಕ್ಷಣೆ ಪಡೆಯಬಹುದಾಗಿದೆ. ನೀರು ಶೇಖರಣೆಯಾಗುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಲು ಕ್ರಮವಹಿಸಬೇಕು. ನಿರುಪಯುಕ್ತ ಘನತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿ ಕೊಳ್ಳಬೇಕು ಎಂದರು.
ಡೆಂಗ್ಯೂ ವೈರಸ್‌ನಿಂದ ಉಂಟಾಗುವ ಕಾಯಿಲೆ. ಇದು ‘ಈಡಿಸ್ ಇಜಿಪ್ಟ್’ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ, ಇದ್ದಕ್ಕಿದ್ದಂತೆ ತೀವ್ರ ಜ್ವರ ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ವಿಪರೀತ ನೋವು, ಹೊಟ್ಟೆ ನೋವು ಕಾಣಿಸಿಕೊಳ್ಳುವುದು. ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳಬಹುದು ಎಂದು ಹೇಳಿದರು.
ಸಭೆಯಲ್ಲಿ ಸೃಜನ ಸಂಘಟನೆಯ ಎನ್.ಇಂದಿರಮ್ಮ, ನಿರಾಶ್ರಿತರ ಮಹಿಳೆಯರ ಟ್ರಸ್ಟ್‌ನ ವಿಜಯಲಕ್ಷ್ಮಿ, ಸುವರ್ಣ ವಿದ್ಯಾ ಚೇತನದ ರಾಮಕೃಷ್ಣಪ್ಪ, ಆಶಾ ಕಾರ್ಯಕರ್ತೆ ಶಹತಜ್, ಚಿಕ್ಕನಾಯಕನಹಳ್ಳಿಯ ಬಿಎಸ್‌ಡಬ್ಲ್ಯೂ ಕಾಲೇಜಿನ ಭೂಮಿಕ, ಲತಾ, ಭಾಗವಹಿಸಿದ್ದರು.