ಅಲೆಮಾರಿಗಳಿಗೆ ಮೀಸಲಿಟ್ಟ ನಿವೇಶನಕ್ಕೆ ಎಸಿ ಭೇಟಿ
ಚಿಕ್ಕನಾಯಕನಹಳ್ಳಿ, ಜು. ೧೩- ಪಟ್ಟಣದ ಹೊರವಲಯದ ದಬ್ಬೆಘಟ್ಟ ಗ್ರಾಮ ವ್ಯಾಪ್ತಿಯಲ್ಲಿ ಬರುವ ಅಲೆಮಾರಿ ಸುಡುಗಾಡು ಸಿದ್ದರಿಗೆ ಮೀಸಲಿರುವ ನಿವೇಶನದ ಜಾಗಕ್ಕೆ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ಭೇಟಿ ನೀಡಿ ಸಮುದಾಯದವರ ಬೇಡಿಕೆಯನ್ನು ಆಲಿಸಿದರು.
೧೨ ಅಲೆಮಾರಿ ಸುಡುಗಾಡು ಜನಾಂಗದವರು ಸುಮಾರು ೩೦ ವರ್ಷಗಳಿಂದ ತಾಲ್ಲೂಕಿನಲ್ಲಿ ಸರಿಯಾದ ಸ್ಥಳವಿಲ್ಲದೆ ವಾಸ ಮಾಡುತ್ತಿದ್ದಾರೆ, ಅವರಿಗೆ ನಿವೇಶನ ಒದಗಿಸಲು ಅಲೆಮಾರಿ ಸುಡುಗಾಡು ಸಿದ್ದ ಜನಾಂಗದವರು ತಾಲ್ಲೂಕು ಕಚೇರಿಗೆ ಹಲವು ಬಾರಿ ಮನವರಿಕೆ ಮಾಡಿಕೊಂಡಿದ್ದರು. ಅವರ ಮನವಿಯಂತೆ ತಿಪಟೂರು ಉಪವಿಭಾಗಾಧಿಕಾರಿ ಅವರಿಗಾಗಿ ಮೀಸಲಿರುವ ದಬ್ಬೆಘಟ್ಟ ಸರ್ವೆ ನಂಬರ್ ಜಮೀನಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಅಲೆಮಾರಿ ಸುಡುಗಾಡು ಸಿದ್ದ ಸಮುದಾಯದವರು ಮಾತನಾಡಿ, ನಿವೇಶನದ ಜಾಗದಲ್ಲಿ ರಸ್ತೆ ಹಾಗೂ ಅಂಗನವಾಡಿ ಮೂಲಭೂತ ಸೌಕರ್ಯಗಳನ್ನು ನೀಡುವ ಜತೆಗೆ ಜಾಗದ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದರು.
ಉಪವಿಭಾಗಾಧಿಕಾರಿ ಸಪ್ತಶ್ರೀ ಮಾತನಾಡಿ, ನೀವು ಕೇಳಿರುವ ಬೇಡಿಕೆಗಳಿಗೆ ಕಾನೂನಿನಲ್ಲಿ ಅದರದೇ ಆದ ವ್ಯವಸ್ಥೆ ಇರುತ್ತದೆ. ನಿಮಗೆ ನಿವೇಶನದ ಹಕ್ಕು ಪತ್ರಗಳು ದೊರೆತರೆ ಎಲ್ಲ ಸೌಲಭ್ಯಗಳು ಒಂದೊಂದಾಗಿ ಸಿಗುತ್ತವೆ. ಈ ಪ್ರದೇಶವು ದಬ್ಬೇಘಟ್ಟ ಗ್ರಾಮ ಪಂಚಾಯ್ತಿಗೆ ಒಳಪಟ್ಟಿದೆ ಹಾಗಾಗಿ ಇಲ್ಲಿಗೆ ವಿದ್ಯುತ್, ಕುಡಿಯುವ ನೀರು ನೀಡಲಾಗಿದೆ. ಸಮುದಾಯದವರೆಲ್ಲರೂ ಸೇರಿ ಪಂಚಾಯ್ತಿಗೆ ಬಂದು ಅರ್ಜಿ ಕೊಡಿ, ಮನವಿ ಅರ್ಜಿಯನ್ನು ಪರಿಶೀಲಿಸಿ ಹಕ್ಕು ಪತ್ರ ದೊರೆಯಲಿದೆ ಎಂದರು.
ಇಲ್ಲಿನ ರಸ್ತೆ ಹಾಗೂ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತೇವೆ. ನಿಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಇನ್ನು ೧೫ ದಿನಗಳಲ್ಲಿ ಇವರ ಹಕ್ಕು ಪತ್ರವನ್ನು ದೊರೆಯುವಂತೆ ಮಾಡಿ ಕೊಡಿ ಎಂದು ತಹಶೀಲ್ದಾರ್ ಕೀರ್ತಿ ರವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೀರ್ತಿ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಕುಮಾರಸ್ವಾಮಿ, ಅಲೆಮಾರಿ ಸುಡುಗಾಡು ಸಿದ್ದ ಜನಾಂಗದ ಮುಖಂಡ ವೆಂಕಟೇಶಯ್ಯ ಮತ್ತಿತರರು ಉಪಸ್ಥಿತರಿದ್ದರು.