ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ತಾಲ್ಲೂಕಿನ ಜನರಿಗೆ ಮರಣ ಶಾಸನ: ಜಗದೀಶ್
ಕುಣಿಗಲ್, ಜು. ೧೩- ಹೇಮಾವತಿ ಲಿಂಕ್ ಕೆನಾಲ್ ಯೋಜನೆಯು ತಾಲ್ಲೂಕಿನ ಜನರಿಗೆ ಮರಣ ಶಾಸನವಾಗಿದೆ. ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ಡಾ. ಎಚ್ .ಡಿ. ರಂಗನಾಥ್ ತಾಲ್ಲೂಕನ್ನು ಕಡೆಗಣಿಸಿ ಮಾಗಡಿ ತಾಲ್ಲೂಕಿಗೆ ನೀರು ಹರಿಸುವ ಹುನ್ನಾರ ನಡೆಸಿದ್ದಾರೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ಎನ್. ಜಗದೀಶ್ ನಾಗರಾಜಯ್ಯ ಆರೋಪಿಸಿದರು.
ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಕ್ ಕೆನಾಲ್ ಯೋಜನೆಯ ಕಾಮಗಾರಿ ಡಿ ೨೬ ಗೆ, ಲಿಂಕ್ ಮಾಡುವುದನ್ನು ಬಿಟ್ಟು ೫೦೦ ಮೀಟರ್ ಕೆಳಭಾಗದ ಅಂತರದಲ್ಲಿ ಲಿಂಕ್ ಮಾಡುತ್ತಿರುವುದರಿಂದ ಕುಣಿಗಲ್ ತಾಲ್ಲೂಕಿನ ಸುಮಾರು ೧೮ ಸಾವಿರ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲದಂತಾಗುತ್ತದೆ ಎಂದರು.
ಜಿಲ್ಲೆಯ ಯಾವುದೇ ಬಿಜೆಪಿ-ಜೆಡಿಎಸ್ ಶಾಸಕರು ಜಿಲ್ಲೆಯಲ್ಲಿ ನಡೆದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದ ಕೆಡಿಪಿ ಸಭೆಯಲ್ಲಿ ಕುಣಿಗಲ್ ಭಾಗಕ್ಕೆ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ನಮ್ಮ ತಾಲ್ಲೂಕಿಗೆ ೩.೩ ಟಿಎಂಸಿ ನೀರು ಹರಿಯಬೇಕಾಗಿದ್ದು ಮೂಲ ನಕ್ಷೆಯಂತೆ ಕುಣಿಗಲ್ ತಾಲ್ಲೂಕಿನ ಎಲ್ಲ ಕೆರೆಗಳಿಗೆ ಶ್ರೀರಂಗ ಏತ ನೀರಾವರಿ ಸೇರಿದಂತೆ ನೀರು ಹರಿಸಲು ಕ್ರಮ ತೆಗೆದುಕೊಳ್ಳುವುದನ್ನ ಬಿಟ್ಟು ಪಕ್ಕದ ಮಾಗಡಿ ಕ್ಷೇತ್ರದ ೬೪ ಕೆರೆಗಳಿಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕುಣಿಗಲ್ ಕ್ಷೇತ್ರಕ್ಕೆ ೩.೩ ಟಿಎಂಸಿ ನೀರು ಮೀಸಲಾಗಿದ್ದು ಮಾಗಡಿ ಕ್ಷೇತ್ರಕ್ಕೆ ಯಾವುದೇ ನೀರು ಅಲೋಕೇಶ ಆಗದಿದ್ದರೂ ಸಹ ನಮ್ಮ ಭಾಗದ ನೀರನ್ನೇ ಮಾಗಡಿ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗುವ ಮಾಜಿ ಸಂಸದ ಡಿಕೆ ಸುರೇಶ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಕ್ಷೇತ್ರದ ಶಾಸಕ ಡಾ. ಎಚ್. ಡಿ. ರಂಗನಾಥ್ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
ತಾಲ್ಲೂಕಿನ ರೈತರನ್ನು ಕಡೆಗಣಿಸಿ ಮಾಗಡಿ ಕ್ಷೇತ್ರಕ್ಕೆ ಕೊಂಡೊಯ್ಯುವ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ. ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರನ್ನು ಎತ್ತಿಕಟ್ಟಿ ಟೀಕೆ ಮಾಡಿಸುವುದನ್ನು ಕೈ ಬಿಡಬೇಕಾಗಿದೆ. ಆದರೆ, ಶಾಸಕರು ಕುಣಿಗಲ್ ಕ್ಷೇತ್ರವನ್ನು ಕಡೆಗಣಿಸಿ ಮಾಗಡಿ ತಾಲ್ಲೂಕಿಗೆ ಹರಿಸಲು ಮುಂದಾಗಿರುವ ಕ್ರಮವನ್ನು ತೀವ್ರವಾಗಿ ಖಂಡಿಸುತ್ತಾ ಇದು ತಾಲ್ಲೂಕಿಗೆ ಮಾಡಿದ ಅನ್ಯಾಯ ಹಾಗೂ ಮರಣ ಶಾಸನವಾಗಿದೆ. ಈ ಲಿಂಕ್ ಕೆನಾಲ್ ಯೋಜನೆಯ ಡಿ ೨೬ ಎಸ್ಕೇಪ್ ಲಿಂಕ್ ಮಾಡಿ ಎಡೆಯೂರು, ಅಮೃತೂರು, ಹುಲಿಯೂರುದುರ್ಗ ಭಾಗಗಳಿಗೆ ನೀರು ಹರಿಸುವ ಕ್ರಮವನ್ನು ಕೈಗೊಳ್ಳಬೇಕು. ವೈ.ಕೆ. ರಾಮಯ್ಯ ಹಾಗೂ ಹುಚ್ಚಮಾಸ್ತಿ ಗೌಡ ಅವರ ಆಶಯದಂತೆ ಮೂಲ ಯೋಜನೆಯಂತೆ ೨೪೦ ಕಿ.ಮೀ ಗೆ ನೀರು ಹರಿಯಬೇಕಾಗಿದ್ದು ಮೊದಲು ನಮ್ಮ ಪಾಲಿನ ನೀರು ನಮ್ಮ ತಾಲ್ಲೂಕಿಗೆ ಕೊತ್ತಿಗೆರೆಯ ಎಲ್ಲ ಭಾಗದ ಕೆರೆಗಳನ್ನು ತುಂಬಿಸಿ ಕುಣಿಗಲ್ ಭಾಗದ ಅಲೋಕೇಶನ ಆಗಿರುವ ನೀರು ಹರಿಸಲು ಕ್ರಮ ತೆಗೆದುಕೊಳ್ಳಲಿ. ಈಗಾಗಲೇ ಕ್ಷೇತ್ರದ ಶಾಸಕರು ಮಾರ್ಗೋನಹಳ್ಳಿಯಿಂದ ನಾಗಮಂಗಲಕ್ಕೆ ಒಂದು ಟಿಎಂಸಿ ನೀರನ್ನು ಹರಿಸಿ ದ್ರೋಹ ಮಾಡಿದ್ದಾರೆ. ಜನ ಆಂದೋಲನ ಕೈಗೊಳ್ಳಬೇಕಾಗಿದೆ ಎಂದು ಎಚ್ಚರಿಕೆ ನೀಡಿದ ಅವರು, ರೈತರು, ಸಂಘ ಸಂಸ್ಥೆಗಳು, ಸಾರ್ವಜನಿಕರು ಉಗ್ರ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಕೆ.ಎಲ್. ಹರೀಶ್, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಜಯಣ್ಣ, ವಕ್ತಾರ ತರೀಕೆರೆ ಪ್ರಕಾಶ್, ಪ್ರೆಸ್ ರಂಗಸ್ವಾಮಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥ್, ನಿಡಸಾಲೆ ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು.