ರಾಮದುರ್ಗಕ್ಕೆ  ಬಸ್ ಸೌಕರ್ಯ : ಮಕ್ಕಳು, ಜನತೆ ಹರ್ಷ
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.13 :- ಬಹುದಿನದ ಬೇಡಿಕೆಯಂತೆ ರಾಮದುರ್ಗ ಊರಿನ ಒಳಗೆ ಬಸ್ ಸಂಚಾರ ಮಾಡುವಂತೆ ಜನತಾದರ್ಶನದಲ್ಲಿ ಮನವಿ ಮಾಡಿದ ಮೇರೆಗೆ ಶುಕ್ರವಾರದಂದು  ಗ್ರಾಮಕ್ಕೆ ಆಗಮಿಸಿದ ಬಸ್ ನ್ನು ಕಂಡ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಕೂಡ್ಲಿಗಿ ಶಾಸಕರು ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕೂಡ್ಲಿಗಿಯಲ್ಲಿ ಜೂನ್ 26ರಂದು  ಸರ್ಕಾರದ ಆದೇಶದಂತೆ ಜರುಗಿದ  ಜಿಲ್ಲಾಡಳಿತ,ತಾಲೂಕು ಆಡಳಿತ ಮತ್ತು  ಶಾಸಕರ ನೇತೃತ್ವದಲ್ಲಿ ನಡೆದ ಜನತಾದರ್ಶನದಲ್ಲಿ ರಾಮದುರ್ಗ  ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಪ್ಪ ಸೇರಿದಂತೆ ಇತರರು  ರಾಮದುರ್ಗ ಗ್ರಾಮದ ಒಳಗೆ ಸೌಕರ್ಯ ಕಲ್ಪಿಸಿ ಕೊಡಬೇಕೆಂದು ವಿದ್ಯಾರ್ಥಿಗಳ ಪರವಾಗಿ ಮನವಿ ಪತ್ರ ಸಲ್ಲಿಸಿದರ ಹಿನ್ನಲೆಯಲ್ಲಿ ಸ್ಪಂದನೆ ನೀಡಿದ ಶಾಸಕರಾದ ಡಾ ಶ್ರೀನಿವಾಸ ತಕ್ಷಣ  ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣ ಅಧಿಕಾರಿಗಳ ಗಮನಕ್ಕೆ ತಂದು ರಾಮದುರ್ಗ ಗ್ರಾಮದಿಂದ ಶಾಲಾ  ಮಕ್ಕಳು ಹಾಗೂ ಗ್ರಾಮದ ಜನತೆ ಬೇರೆಡೆ ಹೋಗಲು ಸುಮಾರು ಎರಡು ಕಿ.ಮೀ ಕ್ರಮಿಸಬೇಕಿದ್ದು ಇದರಿಂದ   ಕೂಡ್ಲಿಗಿ ಘಟಕದ ವತಿಯಿಂದ ಬಸ್ ಸೌಕರ್ಯ  ಕಲ್ಪಿಸಿ ಕೊಡಿ ಎಂದು ಸೂಚನೆ ನೀಡಿದ್ದರಿಂದ ನಿನ್ನೆ  ಗ್ರಾಮಕ್ಕೆ ಬಸ್ ಬಂದಿದ್ದು   ರಾಮದುರ್ಗ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು,ಗ್ರಾಮಪಂಚಾಯಿತಿ  ಸದಸ್ಯ ರಾಜಪ್ಪ ಹಾಗೂ ಇತರರು ಶಾಸಕರಿಗೆ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಅಭಿನಂದನೆ ಸಲ್ಲಿಸಿ ಗ್ರಾಮಕ್ಕೆ ಮೊದಲಬಾರಿ ಬಂದ ಬಸ್ಸಿಗೆ  ಪೂಜೆ ಸಲ್ಲಿಸಿ ಚಾಲಕ ಮತ್ತು ನಿರ್ವಾಹಕರಿಗೆ ಶಾಲು ಹಾಕಿ ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಾಜಪ್ಪ,ಲಕ್ಷ್ಮೀದೇವಿ, ನಾಗರಾಜ, ಯುವ ಬ್ರಿಗೇಡ್ ಕಾರ್ಯಕರ್ತ ಗಣೇಶ ಮತ್ತು ಕುಬೇರ, ಗ್ರಾಮದ  ವಿದ್ಯಾರ್ಥಿಗಳು, ಗ್ರಾಮಸ್ಥರು ಇತರರಿದ್ದರು.