ಭ್ರೂಣಹತ್ಯೆ ತಡೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ: ಕೋಸಂಬೆ
ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.13: ಭ್ರೂಣಹತ್ಯೆ ತಡೆಗೆ ಜಿಲ್ಲಾ ಆರೋಗ್ಯ ಇಲಾಖೆಗೆ ಕ್ರಮ ವಹಿಬೇಕು. ಇದಕ್ಕಾಗಿ ಜಿಲ್ಲೆಯ ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಹೇಳಿದರು.
ನಗರದಲ್ಲಿ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 72 ಸ್ಕ್ಯಾನಿಂಗ್ ಸೆಂಟರ್‍ಗಳಿದ್ದು, ಈ ಸೆಂಟರ್‍ಗಳಲ್ಲಿ ಕಡ್ಡಾಯವಾಗಿ ನಿಯಮ ಪಾಲನೆ ಮಾಡಬೇಕು ಈ ಪೈಕಿ ಐದು ಸರ್ಕಾರಿ ಸೆಂಟರ್‍ಗಳಿದ್ದು, ಉಳಿದವು ಖಾಸಗಿ ಸೆಂಟರ್‍ಗಳಿವೆ. ಈಗಾಗಲೇ ಹರಪನಹಳ್ಳಿಯ ಎರಡು ಸೆಂಟರ್‍ಗಳ ವಿರುದ್ಧ ಕ್ರಮವಹಿಸಲು ಸೂಚಿಸಲಾಗಿದೆ. ಈಗಾಗಲೇ ಈ ಸೆಂಟರ್‍ಗಳನ್ನು ಸೀಜ್ ಕೂಡ ಮಾಡಲಾಗಿದೆ. ಇನ್ನೂ ಹೊಸಪೇಟೆಯ ಶ್ರೀಕರಿ, ಶ್ರೀಪತಿ, ಆರ್ ಎಂ ಸೆಂಟರ್‍ಗಳಿಗೆ ನಿಯಮ ಪಾಲನೆಗಾಗಿ ನೋಟಿಸ್ ಜಾರಿಗೊಳಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸ್ಕ್ಯಾನಿಂಗ್ ಸೆಂಟರ್‍ಗಳ ಒಳಗಡೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವಂತಿಲ್ಲ. ಆದರೆ, ಕೆಲ ಕಡೆ ಒಳಗಡೆ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಮಕ್ಕಳ ಹಕ್ಕುಗಳ ದಮನವಾಗಿದ್ದರೆ, ಪರಿಶೀಲನೆ ನಡೆಸಿ ಕ್ರಮವಹಿಸಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್‍ಗಳು ತಲೆ ಎತ್ತಿದ್ದು, ಮಕ್ಕಳ ಶಿಕ್ಷಣ ಹಾಗೂ ಸುರಕ್ಷೆಗೆ ಮಾರಕವಾಗಿರುವ ಈ ಕೇಂದ್ರಗಳನ್ನು ಕೂಡಲೇ ಬಂದ್ ಮಾಡಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ 30 ಅನಧಿಕೃತ ಸೆಂಟರ್‍ಗಳಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೂಡ್ಲಿಗಿಯಲ್ಲಿ 12, ಹರಪನಹಳ್ಳಿ 9,
ಕೊಟ್ಟೂರಿನಲ್ಲಿ 7, ಹಡಗಲಿಯಲ್ಲಿ 2 ಸೆಂಟರ್‍ಗಳಿವೆ. ಈ ಕೇಂದ್ರಗಳಲ್ಲಿ ಓದುವ ಮಕ್ಕಳ ಶಾಲಾ ದಾಖಲಾತಿ ಒಂದು ಕಡೆಯಲ್ಲಿ ಇದ್ದರೆ, ಇನ್ನೊಂದೆಡೆ ಕೋಚಿಂಗ್ ಸೆಂಟರ್‍ನಲ್ಲಿ ಅಭ್ಯಾಸ ಮಾಡುತ್ತಾರೆ. ಇದರಿಂದ ಮಕ್ಕಳ ಹಕ್ಕುಗಳ ದಮನವಾಗುತ್ತದೆ. ಮಕ್ಕಳ ಸುರಕ್ಷತೆಗೂ ಪೆಟ್ಟು ಬೀಳಲಿದೆ ಎಂದರು.
ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕೆಲಸ ಆಗಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯೂ ಕಡಿಮೆ ಇದೆ. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕೂಡ ಕಡಿಮೆ ಆಗಿದೆ. ಜಿಲ್ಲೆಯ ಉಪನಾಯಕನಹಳ್ಳಿ ಶಾಲೆಗೆ ಭೇಟಿ ನೀಡಿದಾಗ 21 ಮಕ್ಕಳು ಗೈರು ಹಾಜರಾಗಿದ್ದರು. ಇಂತಹ ಪ್ರಕರಣಗಳು ಕಂಡು ಬರುತ್ತಿವೆ. ಬಿಇಒ, ಡಿಡಿಪಿಐಗಳು ಈ ಬಗ್ಗೆ ನಿಗಾವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಮಕ್ಕಳಲ್ಲಿ ಡೆಂಘೀ ಜ್ವರ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ 84 ಶಂಕಿತ ಡೆಂಘೀ ಪ್ರಕರಣಗಳು ಕಂಡು ಬಂದಿದ್ದು, 16 ಮಕ್ಕಳಲ್ಲಿ ಡೆಂಘೀ ದೃಢಪಟ್ಟಿದೆ. ಶಾಲೆ, ಅಂಗನವಾಡಿ, ಹಾಸ್ಟೆಲ್‍ಗಳಲ್ಲಿ ತಪಾಸಣೆ ನಡೆಸಲು ಕೂಡ ಸೂಚಿಸಲಾಗಿದೆ. ಮಕ್ಕಳ ಆರೋಗ್ಯಕ್ಕೆ ಒತ್ತು ನೀಡಬೇಕು. ಆರೋಗ್ಯ ಇಲಾಖೆಯಿಂದ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ನಡೆಸಬೇಕು ಎಂದರು.
ಜಿಲ್ಲೆಯಲ್ಲಿ 218 ಬಾಲ ಗರ್ಭಿಣಿಯರ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಪೈಕಿ 53 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ 2022ರಲ್ಲಿ 34 ಪೋಕ್ಸೋ ಪ್ರಕರಣಗಳು ದಾಖಲಾದರೆ, 2023ರಲ್ಲಿ 59, 2024ರಲ್ಲಿ 18 ಪ್ರಕರಣಗಳು ದಾಖಲಾಗಿವೆ. ಮೂರು ವರ್ಷಗಳಲ್ಲಿ 111 ಪ್ರಕರಣಗಳ ಪೈಕಿ ಒಂದೇ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಹಾಗಾಗಿ ಪೊಲೀಸ್ ಇಲಾಖೆ ತ್ವರಿತ ತನಿಖೆ ನಡೆಸಿ, ಕ್ರಮವಹಿಸಲು ತಿಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 462 ಇದೆ. ಪೋಷಣ್ ಟ್ರ್ಯಾಕ್ ತಂಡ ಕೂಡ ಈ ವಿಷಯದಲ್ಲಿ ಕೆಲಸ ಮಾಡಿ, ಮಕ್ಕಳನ್ನು ಅಪೌಷ್ಟಿಕತೆಯಿಂದ ಪಾರು ಮಾಡಲು ಕ್ರಮವಹಿಸಬೇಕು. ಕಳೆದ ಮೂರು ತಿಂಗಳಲ್ಲಿ 41 ಮಕ್ಕಳು ಜನನದ ವೇಳೆ ಮೃತಪಟ್ಟಿವೆ. ಈ ಬಗ್ಗೆ ಅಗತ್ಯ ಸುರಕ್ಷಾ ಕ್ರಮವಹಿಸಲು ಆರೋಗ್ಯ ಇಲಾಖೆಗೂ ಸೂಚಿಸಲಾಗಿದೆ ಎಂದರು.
ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ 98 ಬಾಲ್ಯ ವಿವಾಹ ಪ್ರಕರಣಗಳಲ್ಲಿ 89 ಮದುವೆಗಳನ್ನು ತಡೆಹಿಡಿಯಲಾಗಿದೆ. 9 ಪ್ರಕರಣಗಳಲ್ಲಿ ಎಫ್ ಐಆರ್ ಆಗಿದೆ ಎಂದರು.
ಜಿಲ್ಲೆಯ ವಸತಿ ಶಾಲೆಗಳಲ್ಲಿ ದೂರು, ಸಲಹಾ ಪೆಟ್ಟಿಗೆಗಳನ್ನು ಇಡಲು ಸೂಚಿಸಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಕ್ರಮವಹಿಸಬೇಕು. ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಕಂಡು ಬಂದರೆ ಕೂಡಲೇ ಸಂಬಂಧಿಸಿದ ಇಲಾಖೆ ಕಾನೂನು ಕ್ರಮವಹಿಸಬೇಕು. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗಾಗಿ ಮಕ್ಕಳ ಗ್ರಾಮಸಭೆ ನಡೆಸಬೇಕು. ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮವಹಿಸಬೇಕು. ಅವರ ಹಕ್ಕುಗಳು ದಮನವಾಗದಂತೆ ನಿಗಾವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಮಕ್ಕಳ ದತ್ತು ಪಾಲನಾ ಕೇಂದ್ರ ತಪಾಸಣೆಗೆ ಕ್ರಮವಹಿಸಲಾಗುವುದು. ಬಾಲ್ಯವಿವಾಹ ತಡೆ ಸಂಬಂಧ ಬಂದ ಪ್ರಕರಣಗಳ ಪರಿಶೀಲನೆಗೆ ಮನೆಗಳ ಭೇಟಿ ನೀಡಿ ಕ್ರಮವಹಿಸಲು ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಂದೀಪ್ ಕುಮಾರ ಉಂಕ್ರಿ ಇದ್ದರು.