ಆಸ್ತಿ ತೆರಿಗೆ ಮಾಡದ ಖಾಸಗಿ, ಅನುದಾನಿತ ಶಾಲೆಗಳ ವಿರುದ್ಧ ಕ್ರಮ:ಪೌರಾಯುಕ್ತ
ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.13: ಆಸ್ತಿ ತೆರಿಗೆ ಪಾವತಿ ಮಾಡದ ಖಾಸಗಿ ಅನುದಾನಿತ ಶಾಲೆ, ಚಿತ್ರಮಂದಿರ, ಸ್ಟಾರ್ ಹೋಟೆಲ್, ಲಾಡ್ಜ್, ಕಲ್ಯಾಣ ಮಂಟಪಗಳು, ಅಪಾರ್ಟಮೆಂಟ್ ಸೇರಿದಂತೆ ವಾಣಿಜ್ಯ ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಮನೋಹರ್ ಹೇಳಿದರು.
ನಗರಸಭೆ ಅಧ್ಯಕ್ಷೆ ಎ.ಲತಾ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಖಾಸಗಿ ಅನುದಾನಿತ ಶಾಲೆಗಳು, ಚಿತ್ರಮಂದಿರ, ಸ್ಟಾರ್ ಹೋಟೆಲ್, ಲಾಡ್ಜ್ ಅಪಾರ್ಟಮೆಂಟ್‍ಗಳು, ವಾಣಿಜ್ಯ ಕಟ್ಟಡಗಳು ಸೇರಿ ಇತರೆ ಮೂಲಗಳಿಂದ ಸುಮಾರು 5 ಕೋಟಿ ರೂ.ಗೂ ಅಧಿಕದಷ್ಟು ಆಸ್ತಿ ತೆರಿಗೆ ಬಾಕಿ ಹಣ ನಗರಸಭೆಗೆ ಸಂದಾಯವಾಗಬೇಕಿದೆ. ಇದಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ವಾರದೊಳಗೆ ಅವರು ತೆರಿಗೆ ಹಣ ಪಾವತಿ ಮಾಡಬೇಕು. ಇಲ್ಲಾವದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
10 ನೇ ವಾರ್ಡ್ ಸದಸ್ಯೆ ರೋಹಿಣಿ ವೆಂಕಟೇಶ್ ಅವರು, ನಗರದಲ್ಲಿ ಯಾವ, ಯಾವ ವಾರ್ಡ್‍ಗಳಲ್ಲಿ ಎಷ್ಷು ಖಾಸಗಿ ಶಾಲೆಗಳು, ಕಲ್ಯಾಣ ಮಂಟಪ, ಚಿತ್ರಮಂದಿರಗಳು ನಗರಸಭೆಗೆ ಆಸ್ತಿ ತೆರಿಗೆ ಪಾವತಿ ಮಾಡಿವೆ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುವಂತೆ ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ನಗರದಲ್ಲಿ 25 ಖಾಸಗಿ ಅನುದಾನಿತ ಶಾಲೆಗಳು, 26 ಕಲ್ಯಾಣ ಮಂಟಪಗಳು, ನಾಲ್ಕು ಚಿತ್ರಮಂದಿರಗಳು ಇವೆ. ಈ ಕುರಿತು ಇನ್ನು 15 ದಿನಗಳಲ್ಲಿ ದಾಖಲೆ ಸಮೇತ ಮುಂದಿನ ಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮೀತಿಮೀರಿದೆ. ಇದಕ್ಕೆ ಕಡಿವಾಣ ಇಲ್ಲದಂತಾಗಿವೆ. ಸಾರ್ವಜನಿಕರ ಮೇಲೆ ಎಲ್ಲಂದರಲ್ಲಿ ದಾಳಿ ನಡೆಸಿ ಗಾಯಗೊಳಿಸಿವೆ. ಇದರ ಬದಲಾಗಿ ಕಾರಿಗನೂರು ಬಳಿ ಇರುವ ಘನತಾಜ್ಯ ವಿಲೆವಾರಿ ಘಟಕದ 10 ಎಕರೆ ಜಾಗದಲ್ಲಿ ತಂತಿ ಬೇಲಿ ನಿರ್ಮಿಸಿ ನಾಯಿಗಳನ್ನು ಕೂಡಿ ಹಾಕಿ, ಸಂಘ-ಸಂಸ್ಥೆಗಳಿಂದ ಅವುಗಳಿಗೆ ಆಹಾರ ನೀಡಲು ಮುಂದೆ ಬರುತ್ತವೆ ಎಂದು 5 ವಾರ್ಡ್ ಸದಸ್ಯ ರೂಪೇಶ್ ಕುಮಾರ್ ಸಭೆಗೆ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ 24 ನೇ ವಾರ್ಡ್ ಸದಸ್ಯ ರಾಘವೇಂದ್ರ, ನಮ್ಮ ವಾರ್ಡ್‍ನಲ್ಲಿಯೂ ನಾಯಿಗಳ ಸಂಖ್ಯೆ ಹೆಚ್ಚಿದೆ. ಅದರಲ್ಲಿಯೂ ಹುಚ್ಚು ನಾಯಿಗಳು ಇವೆ. ಇವುಗಳಿಂದ ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸಂತಾಗಿದೆ. ನಾಯಿಗಳ ಸಂತಾಹರಣ ಚಿಕಿತ್ಸೆಗಾಗಿ ನಗರಸಭೆ ಕಳೆದ ವರ್ಷ 19 ಲಕ್ಷ ರೂ ಖರ್ಚು ಮಾಡಿದೆ ಎಂದು ಧ್ವನಿಗೂಡಿಸಿದರು. ಈ ವೇಳೆ 31 ನೇ ವಾರ್ಡ್ ಸದಸ್ಯ ತಾರಿಹಳ್ಳಿ ಜಂಬುನಾಥ, ನಗರದಲ್ಲಿ ಜನರಿಗಿಂತ ನಾಯಿಗಳ ಸಂಖ್ಯೆ ಹೆಚ್ಚಿವೆ ಎಂದು ಹೇಳುತ್ತಿಂದತೇ ಸಭೆಯಲ್ಲಿ ಎಲ್ಲರೂ ನಗೆಗಡಲಲ್ಲಿ ತೇಲಿದರು.
ನಗರಸಭೆ ಆಸ್ತಿಗಳು ಒತ್ತುವರಿಯಾಗುತ್ತಿವೆ. ಇವುಗಳನ್ನು ಗುರುತಿಸಿ, ತಂತಿ ಬೇಲಿ ನಿರ್ಮಿಸುವಂತೆ ಕಳೆದ ಒಂದು ವರ್ಷದಿಂದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮವಾಗಿಲ್ಲ ಎಂದು 34 ನೇ ವಾರ್ಡ್ ಲತಾ ಸಂತೋಷ್ ಸಭೆಗೆ ತಿಳಿಸಿದರು. ತಂತಿ ಬೇಲಿ ನಿರ್ಮಾಣಕ್ಕೆ ತಡವಾದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಪೌರಾಯುಕ್ತರು, ಶೀಘ್ರದಲ್ಲಿ ಕ್ರಮ ವಹಿಸಲಾಗುವುದು ಎಂದರು.
ಸಾಯಿಬಾಬಾ ದೇವಸ್ಥಾನದಿಂದ ಟಿ.ಬಿ.ಡ್ಯಾಂ ಹೋಗುವ ರಸ್ತೆಗೆ ಅಭಿಯರಾಜ್ ಬಲ್ಡೋಟಾ ರಸ್ತೆಯಂದು ನಾಮಕರಣ ಮಾಡಿ ನಾಮಫಲಕ ಹಾಕಿರುತ್ತಾರೆ. ಬಲ್ಡೋಟಾ ಸಂಸ್ಥೆಯಿಂದ ಹೊಸಪೇಟೆ ನಗರಕ್ಕಾಗಿ ಅಥವಾ ಟಿ.ಬಿ.ಡ್ಯಾಂಗೆ ಆಗಲಿ ಯಾವುದೇ ಕೊಡುಗೆ ಇಲ್ಲ. ನಗರಸಭೆ ಆಸ್ತಿಗೆ ಅವರು ಬೋರ್ಡ್ ಹಾಕುವುದು ಎಷ್ಷು ಸರಿ. ಹಾಕಿರುವ ಭೋರ್ಡ್ ತೆರವುಗೊಳಿಸಬೇಕು ಎಂದು 13 ನೇ ವಾರ್ಡ್ ಹನುಮಂತ (ಬುಜ್ಜಿ) ಆಗ್ರಹಿಸಿದರು. 
ನಗರದ 16 ನೇ ವಾರ್ಡ್‍ನಲ್ಲಿರುವ ಕುರಿ ಮಾಂಸದ ಮಾರುವ ಮಾರುಕಟ್ಟೆ ತುಂಬಾ ಹಳೆಯದಾಗಿದ್ದು, ಶಿಥಿಲಾವ್ಯಸ್ಥೆಯಲ್ಲಿದೆ. ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ಯುಜಿಡಿ ಸೇರಿದಂತೆ ಮೂಲಭೂತ ಸೌಕರ್ಯ ಒಳಹೊಂಡ ನೂತನ ಕಟ್ಟಡ ನಿರ್ಮಾಣ ಮಾಡಲು ಕ್ರಮ ವಹಿಸಬೇಕು ಎಂದು 16 ನೇ ವಾರ್ಡ್ ಮುಮ್ತಾಜ್ ಬೇಗಂ ಅವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, 1 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಕುರಿ ಮಾಂಸ ಮಾರುಕಟ್ಟೆ ನಿರ್ಮಿಸಲಾಗುವುದು ಎಂದರು.
ನಗರದ ವಿವಿಧ ಪ್ರದೇಶದಲ್ಲಿ ನೆಟ್ಟ ಸಸಿಗಳಿಗೆ ಸೌಂದರ್ಯಕರಣಕ್ಕಾಗಿ 25 ಲಕ್ಷ ರೂ ಅನುದಾನ ನೀಡುವಂತೆ ಕೋರಿದ್ದ ವಿಷಯ ಸೇರಿ ಹಲವು ವಿಷಯಗಳನ್ನು ಸಭೆಯಲ್ಲಿ ಕೈಬಿಡಲಾಯಿತು. ಉಪಾಧ್ಯಕ್ಷ ಶೇಕ್ಷಾವಲಿ ಹೆಳವರ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ್ ಇತರರು ಇದ್ದರು.