ಕಾಂಗ್ರೆಸ್‍ನಿಂದ ಬೃಹತ್ ಪ್ರತಿಭಟನಾ ಧರಣಿ
ಸಂಜೆವಾಣಿ ನ್ಯೂಸ್
ಮೈಸೂರು:ಜು.13:- ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಬೃಹತ್ ಪ್ರತಿಭಟನಾ ಧರಣಿ ನಡೆಯಿತು.
ಜೆಎಲ್‍ಬಿ ರಸ್ತೆಯ ಮುಡಾ ಪಕ್ಕದಲ್ಲಿಯೇ ಇರುವ ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದ ಮುಂಭಾಗದಲ್ಲಿ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ಧರಣಿ ನಡೆಸಿದರು. ಬಿಜೆಪಿ ಹೋರಾಟ ಭ್ರಷ್ಟಾಚಾರದ ಕಡೆ, ಕಾಂಗ್ರೆಸ್ ಜನಪರ ಆಡಳಿತದ ವಿರೋಧಿ ಬಿಜೆಪಿ ಭಿತ್ತಿಪತ್ರಗಳನ್ನು ಹಿಡಿದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರ ಕೂಗಿದರು.
ಮುತ್ತಿಗೆ ನಿರ್ಣಯ: ಧರಣಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಮುತ್ತಿಗೆ ಹಾಕುವ ನಿರ್ಣಯವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಂಡಿಸಿದರು. ಬಳಿಕ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಮುಡಾ ಮುಂಭಾಗದ ಮೂಲಕ ಬಿಜೆಪಿ ವತಿಯಿಂದ ನಡೆಯುತ್ತಿರುವ ಪ್ರತಿಭಟನಾ ಸ್ಥಳದತ್ತ ತೆರಳಲು ಮುನ್ನುಗ್ಗಿದರು.
ಮುಡಾ ಆವರಣದಲ್ಲಿ ಬ್ಯಾರಿಗೇಡ್ ತಡೆಗೋಡೆ ನಿರ್ಮಿಸಿದ ಪೆÇಲೀಸರು ಕಾರ್ಯಕರ್ತರನ್ನು ತಡೆದರು. ಈ ವೇಳೆ ಪೆÇಲೀಸರೊಂದಿಗೆ ತೀವ್ರ ವಾಗ್ವಾದ ನಡೆಯಿತು. ತಳ್ಳಾಟ ನೂಕಾಟ ನಡೆಯಿತು. ಕಾರ್ಯಕರ್ತರು ವಿವಿಧ ಘೋಷಣೆಗಳನ್ನು ಕೂಗಿದರು. ನಗರ ಪೆÇಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಬಳಿಕವೂ ಪ್ರತಿಭಟನೆ ಮುಂದುವರಿಯಿತು. ತುಂತುರು ಮಳೆಯಲ್ಲಿಯೂ ಮಹಿಳಾ ಕಾರ್ಯಕರ್ತೆಯರು ಘೋಷಣೆ ಕೂಗಿದರು.
ಪೆÇಲೀಸರ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ಹಳೆ ಜಿಲ್ಲಾಧಿಕಾರಿ ಕಚೇರಿಗೆ ಹೋಗಲು ಯತ್ನಿಸಿದರು. ಮಹಾರಾಜ ಕಾಲೇಜು ಕ್ಯಾಂಟಿನ್ ಮುಂಭಾಗದಲ್ಲಿ ಪೆÇಲೀಸ್ ಸಿಬ್ಬಂದಿ ತಡೆದರು. ಮತ್ತೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಯಕರ್ತರು ಬಿಜೆಪಿ ನಾಯಕರ ಭೇಟಿಗೆ ಅವಕಾಶ ನೀಡುವಂತೆ ಪೆÇಲೀಸರನ್ನು ಒತ್ತಾಯಿಸಿದರು.
ಇದಕ್ಕೂ ಮುನ್ನ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಮಾಡಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಂತೆ ಜೈಲಿಗೆ ಕಳುಹಿಸುವ ಸಂಚು ಮಾಡಿರುವರೇ? ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುವ ತಾಕತ್ತು ಇದೀಯೇ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದದ್ದನ್ನು ಸಹಿಸದ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ದಲಿತರ ಹಿತಾಸಕ್ತಿ ಕಾಪಾಡುವ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬದ್ಧರಾಗಿರುವ, ಮುಸ್ಲಿಂ, ರೈತ ಹಿತ ಕಾಯುವ ಸಿದ್ದರಾಮಯ್ಯ ಅವರನ್ನು ಏನು ಮಾಡಲಾಗದು ಎಂದು ಹೇಳಿದರು.
ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ಕಾಂಗ್ರೆಸ್ ಧರಣಿ ಬಿಜೆಪಿಯವರಿಗೆ ಎಚ್ಚರಿಕೆಯ ಗಂಟೆ. ಪ್ರತಿಭಟನೆ ಮಾಡಲು ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲ. ಇಡೀ ಪಕ್ಷ ಸಿದ್ದರಾಮಯ್ಯ ಅವರ ಜತೆಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಮಾತನಾಡಿ, ಸುಳ್ಳು ಮತ್ತು ಸತ್ಯದ ನಡುವೆ ಹೋರಾಟ ನಡೆಯುತ್ತಿದೆ. ದಕ್ಷ ಪ್ರಾಮಾಣಿಕ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರ ವಿರುದ್ಧ ಸುಳ್ಳು ಆರೋಪ ಮಾಡಿದರೆ ನಾವು ಸಹಿಸುವುದಿಲ್ಲ ಎಂದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ನಾವೆಲ್ಲರೂ ನ್ಯಾಯದ ಪರವಾದ ಹೋರಾಟದಲ್ಲಿ ಭಾಗಿಯಾಗಿದ್ದೇವೆ. ಬಿಜೆಪಿಯವರು ಸತ್ಯಾಂಶವಿಲ್ಲದ ಹುಸಿ ಹೋರಾಟ ಮಾಡುತ್ತಿದ್ದಾರೆ. ಸುಳ್ಳನ್ನು ಸಾವಿರ ಬಾರಿ ಹೇಳಿ ನಿಜ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡಿದಾಗ ನಾನೇ ಮುಡಾ ಅಧ್ಯಕ್ಷನಾಗಿದ್ದೆ. ನಿವೇಶನ ಹಂಚಿಕೆಗೂ ಮುನ್ನ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಸಿದ್ದರಾಮಯ್ಯ ಯಾರ ಮೇಲೂ ಪ್ರಭಾವ ಬೀರಿಲ್ಲ. ಕಳಂಕಿತ ರಾಜಕಾರಣಿಗಳು ಶುದ್ಧ ರಾಜಕಾರಣಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರಿಗೆ ದಾಖಲೆ ಕೊಡುವಂತೆ ಕೇಳಬೇಕಿದೆ. ಮುಡಾಗೆ ಯಾಕೆ ಮುತ್ತಿಗೆ ಹಾಕುತ್ತಿದ್ದೀರಿ ಎಂದು ಪ್ರಶ್ನೆ ಮಾಡಬೇಕಿದೆ ಎಂದು ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಸಚಿವ ಶಿವಣ್ಣ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಆರ್.ಧರ್ಮಸೇನಾ, ಮಂಜುಳಾ ಮಾನಸ, ಜೆ.ಜೆ. ಆನಂದ್, ಬಿ.ಎಂ. ರಾಮು, ಪುಷ್ಪಾಲತಾ ಚಿಕ್ಕಣ್ಣ, ಕುಮುದಾ, ಭವ್ಯ, ಭಾಸ್ಕರ್‍ಗೌಡ, ಈಶ್ವರ್ ಚಕ್ಕಡಿ, ಶಿವಪ್ರಸಾದ್, ಸಂತೋಷ್, ಬಸವರಾಜು, ಮಂಜು, ಅಶೋಕ್, ಮಂಜುಳಾ ಮಾದೇವ್, ಶ್ರೀಧರ, ರಾಹುಲ್, ಮನೋಜ್, ಲತಾ ಮೋಹನ್, ಬಿ.ಕೆ. ಪ್ರಕಾಶ್, ಸುಶೀಲ ಕೇಶವಮೂರ್ತಿ ಮುಂತಾದವರಿದ್ದರು.