ಮೂಲ ಸೌಕರ್ಯಕ್ಕೆ 15ರಂದು ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು:ಜು.13:- ನಾಗರಿಕ ಸಮಾಜದಲ್ಲಿ ಗೌರವದ ಬದುಕು ಸಾಗಿಸಲು ಕನಿಷ್ಠ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಜು.15ರಂದು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.
ಈ ಕುರಿತು ಒಕ್ಕೂಟದ ಅಧ್ಯಕ್ಷ ಎ.ಎಂ.ಬಾಬು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9.30ಕ್ಕೆ ರಿಂಗ್ ರಸ್ತೆಗೆ ತಾಕಿಕೊಂಡಂತಿರುವ ಮಾನಸಿನಗರ ಹಾಗೂ ಕೆಎಸ್‍ಎಫ್‍ಸಿ ಬಡಾವಣೆಯ ವಿನಾಯಕ ಉದ್ಯಾನವನದಿಂದ ಪಾದಯಾತ್ರೆ ಅರಂಭಗೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿ, ನಂತರ ಸಮಾವೇಶಗೊಂಡು, ತದನಂತರ ಜಿಲ್ಲಾಧಿಕಾರಿಗಳ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವ ಮೂಲಕ ಅಂತ್ಯಗೊಳ್ಳಲಿದೆ ಎಂದು ತಿಳಿಸಿದರು.
ಒಕ್ಕೂಟದ ವ್ಯಾಪ್ತಿಯಲ್ಲಿರುವ ಪ್ರತೀ ಬಡಾವಣೆಯಿಂದ 20 ಮಂದಿ ಪ್ರತಿಭಟನೆಯಲ್ಲಿ ಸಾಂಕೇತಿಕವಾಗಿ ಭಾಗವಹಿಸಲಿದ್ದು, ಅಂದಾಜು 500ಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದೆ. ಕಾವೇರಿ ನೀರನ್ನು ಒಕ್ಕೂಟದ ವ್ಯಾಪ್ತಿಯ ಎಲ್ಲಾ ಬಡಾವಣೆಗಳಿಗೆ ಒದಗಿಸಬೇಕು. ಒಳಚರಂಡಿ ವ್ಯವಸ್ಥೆ ಸುವ್ಯಸ್ಥಿತಗೊಳಿಸಬೇಕು. ಜನಸಾಂದ್ರತೆಗೆ ಅನುಗುಣವಾಗಿ ತ್ಯಾಜ್ಯ ಶುದ್ಧೀಕರಣ ಘಟಕ ತೆರೆಯಬೇಕು. ಒಳಚರಂಡಿ ವ್ಯವಸ್ಥೆಯ ಅಂತರಸಂಪರ್ಕ ಜಾಲ ವಿಸ್ತರಿಸಿ ಸದೃಢಗೊಳಿಸಬೇಕು. ಅವೈಜ್ಞಾನಿಕ ವಿದ್ಯುತ್ ವ್ಯವಸ್ಥೆ ಸರಿಪಡಿಸುವುದು ಹಾಗೂ ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ದಶಕಗಳ ಹಿಂದೆ ಮಾಡಿದ ರಸ್ತೆಗಳು ಭಾಗಶಃ ಹಾಳಾಗಿದ್ದು, ಅವುಗಳ ಕಾಮಗಾರಿ ನಿರ್ವಹಿಸಬೇಕು. ನಗರ ಸಾರಿಗೆ ಸಂಸ್ಥೆಯ ಬಸ್ ಸಂಪರ್ಕ ಜಾಲ ಹೆಚ್ಚಿಸಬೇಕು ಎಂಬಿವೇ ಮೊದಲಾದ ಬೇಡಿಕೆ ಈಡೇರಿಕೆಗೆ ಈ ವೇಳೆ ಆಗ್ರಹಿಸಲಾಗುವುದೆಂದರು.
ಉಪಾಧ್ಯಕ್ಷ ಎಂ.ಎಚ್.ಚೆಲುವೇಗೌಡ, ಕಾರ್ಯದರ್ಶಿ ಎಲ್.ಪ್ರಕಾಶ್, ಸಹಕಾರ್ಯದರ್ಶಿ ಎಂ.ಎಲ್.ಅರುಣ್, ಸಂಘಟನಾ ಕಾರ್ಯದರ್ಶಿ ಬೊಮ್ಮೇಗೌಡ, ಸಹ ಸಂಘಟನಾ ಕಾರ್ಯದರ್ಶಿ ಡಿ.ಕೃಷ್ಣೇಗೌಡ, ಖಜಾಂಚಿ ಎಚ್.ನರಸಿಂಹೇಗೌಡ, ಮಾಧ್ಯಮ ಕಾರ್ಯದರ್ಶಿ ಎಚ್.ಎಸ್.ರಾಘವೇಂದ್ರ ಭಟ್ ಉಪಸ್ಥಿತರಿದ್ದರು.