ಸಿಎಂ ರಾಜೀನಾಮೆ ನೀಡುವವರೆಗೆ ಹೋರಾಟ
ಸಂಜೆವಾಣಿ ನ್ಯೂಸ್
ಮೈಸೂರು:ಜು.13:- ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಸಾವಿರಾರು ಕೋಟಿ ಅವ್ಯವಹಾರದ ತನಿಖೆಯನ್ನು ಸಿಬಿಐಗೆ ವಹಿಸಿ, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಮಹಾರಾಜ ಕಾಲೇಜು ಮೈದಾನದ ಬಳಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ. ಹಗರಣದಲ್ಲಿ ಸಿದ್ದರಾಮಯ್ಯ ಅವರ ನೇರ ಪಾತ್ರವಿದೆ. ನಿವೇಶನಗಳನ್ನು ಕಾನೂನಾತ್ಮಕವಾಗಿ ಪಡೆದುಕೊಂಡಿದ್ದೇವೆ ಎಂದು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾನೂನುಬಾಹಿರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ನಿವೇಶನ ಪಡೆದಿರುವುದರಿಂದ ರಾಜೀನಾಮೆ ಕೊಡುವ ತನಕ ಹೋರಾಟ ಮುಂದುವರಿಯಲಿದೆ. ವಾಲ್ಮೀಕಿ ನಿಗಮ, ಮುಡಾ ಹಗರಣವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇವೆ ಎಂದರು.
ಮುಡಾ ಸ್ವಾಧೀನಪಡಿಸಿಕೊಂಡ ಜಮೀನಿನ ಬದಲಿಗೆ ಪಕ್ಕದಲ್ಲೇ ನಿವೇಶನ ಕೊಡಬೇಕು. ಅಥವಾ ಹೊಸದಾಗಿ ರಚನೆಯಾಗುವ ಬಡಾವಣೆಯಲ್ಲಿ ಕೊಡಬೇಕು. ಆದರೆ, ಈ ಸ್ವಾಧೀನಕ್ಕೂ ಮುನ್ನ ರಚನೆಯಾಗಿರುವ ಬಡಾವಣೆಯಲ್ಲಿ ನೀಡಿರುವುದರಿಂದ ಅಧಿಕಾರ ದುರುಪಯೋಗವಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಸೇರಿದಂತೆ ಪ್ರತಿಯೊಂದು ವ್ಯವಹಾರವೂ ಬೋಗಸ್ ಅಗಿದೆ ಎಂದು ದೂರಿದರು.
ನಾನು ಹಿಂದುಳಿದ ನಾಯಕನಾಗಿರುವುದರಿಂದ ಬಿಜೆಪಿಯವರು ಸಹಿಸುತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಈಗ ಜಾತಿ ಅಸ್ತ್ರ ಬಳಸಿ ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೆಸ್‍ನಲ್ಲಿರುವ ಬಿ.ಕೆ.ಹರಿಪ್ರಸಾದ್ ಅವರೇ ನಾನೊಬ್ಬ ಅತಿ ಹಿಂದುಳಿದ ವರ್ಗಗಳ ನಾಯಕನೆಂದು ಹೇಳಿದ್ದಾರೆ. ಅಲ್ಲದೆ ಬಿಜೆಪಿಯವರು ಬಿಟ್ಟರೂ ನಾನು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಅವರನ್ನು ತುಳಿಯುವ ಪ್ರಶ್ನೆಯೇ ಬರುವುದಿಲ್ಲ ಎಂದರು.
ಸಂವಿಧಾನದಲ್ಲಿ ಪ್ರತಿಪಕ್ಷಗಳಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ, ಕಾಂಗ್ರೆಸ್ ಸರ್ಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ. ಸಂವಿಧಾನದ ಪುಸ್ತಕ ಹಿಡಿದು ರಾಹುಲ್‍ಗಾಂಧಿ ಪ್ರಮಾಣ ವಚನ ಸ್ವೀಕರಿಸಿದರೆ, ಮತ್ತೊಂದು ಕಡೆ ಕರ್ನಾಟಕದಲ್ಲಿ ಚಳವಳಿ ಹತ್ತಿಕ್ಕುವ ಕೆಲಸ ಮಾಡಿ ಇಬ್ಬಂದಿ ನೀತಿ ಅನುಸರಿಸುತ್ತಿದೆ. ನಮ್ಮ ಅವಧಿ, ಜೆಡಿಎಸ್ ಕಾಂಗ್ರೆಸ್ ಸರ್ಕಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಬಂಧಿಸಲಿ ಎಂದರು.
ರಾಜ್ಯದ ಖಜಾನೆ ಖಾಲಿ: ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರು ಸಿಎಂ ತವರು ಎಂದು ಪ್ರತಿಷ್ಠೆಯಾಗದೆ ಅಭಿವೃದ್ಧಿ ವಿಚಾರದಲ್ಲಿ ಪ್ರತಿಷ್ಠೆಯಾಗಬೇಕು. ರಾಜ್ಯದಲ್ಲಿ ಖಜಾನೆ ಖಾಲಿಯಾಗಿ ಅಭಿವೃದ್ಧಿ ಕಾರ್ಯಕ್ಕೆ ಹಣವಿಲ್ಲದಂತಾಗಿದೆ. ರಾಜ್ಯದಲ್ಲಿ ರಸ್ತೆಗಳ ಹಳ್ಳ, ಗುಂಡಿ ಮುಚ್ಚಲು ಹಣವಿಲ್ಲ. ಡೆಂಗ್ಯೂ ನಿಯಂತ್ರಿಸಲು ಯಾವುದೇ ಕ್ರಮಕೈಗೊಂಡಿಲ್ಲ.
ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲದೆ ಸಾಲವನ್ನು ದುಪ್ಪಟ್ಟು ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದಾಗಿ ಅಭಿವೃದ್ಧಿ ಕೆಲಸ ಕಾರ್ಯಗಳು ಕುಂಠಿತವಾಗಿವೆ ಎಂದ ಅವರು, ಸಿದ್ದರಾಮಯ್ಯ ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕರಾದ ಎನ್.ಬಾಲರಾಜ್, ನಿರಂಜನಕುಮಾರ್, ಹರ್ಷವರ್ಧನ್, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ಕೌಟಿಲ್ಯ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮುಖಂಡರಾದ ಎಂ.ಜಿ.ಮಹೇಶ್, ಮಂಗಳಾ ಸೋಮಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.