ಚುನಾವಣಾ ಕಣದಿಂದ ಹಿಂದೆ ಸರಿದ ಆಲೂರು ಮಲ್ಲು: ಮೂಡ್ಲುಪುರ ನಂದೀಶ್‍ಗೆ ಬೆಂಬಲ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 12- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಆಲೂರು ಮಲ್ಲು ಕಣದಿಂದ ಹಿಂದೆ ಸರಿದು ಹಾಲಿ ಮಹಾಸಭಾದ ಅಧ್ಯಕ್ಷ ಮೂಡ್ಲಪುರ ನಂದೀಶ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಸಹ ಮಹಾಸಭಾದ ಅಧ್ಯಕ್ಷನಾಗಬೇಕೇಂಬ ಇಚ್ಚೆಯೊಂದಿಗೆ ನಾಮ ಪತ್ರ ಸಲ್ಲಿಸಿದ್ದೆ. ಆದರೆ, ಹಾಲಿ ಅಧ್ಯಕ್ಷ ಮೂಡ್ಲುಪುರ ನಂದೀಶ್ ಮತ್ತೊಂದು ಅವಕಾಶವನ್ನು ನೀಡಿ. ಈಗಾಗಲೇ ಪ್ರಗತಿಯಲ್ಲಿರುವ ಬಸವ ಭವನ, ಬಸವೇಶ್ವರ ಪುತ್ಥಳಿ ನಿರ್ಮಾಣ ಸೇರಿದಂತೆ ಅನೇಕ ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ. ಇವೆಲ್ಲವನ್ನು ಪೂರ್ಣಗೊಳಿಸಲು ಮತ್ತೊಂದು ಅವಕಾಶ ಕೊಡುವಂತೆ ಕೇಳಿಕೊಂಡರು. ಅದರಂತೆ ಕಣದಿಂದ ಹಿಂದೆ ಸರಿದು ಅವರಿಗೆ ಸಂಪೂರ್ಣ ಬೆಂಬಲ ನೀಡುವ ಜೊತೆಗೆ ಐದು ತಾಲೂಕುಗಳಲ್ಲಿ ಅವರ ಪರ ಪ್ರಚಾರ ಮಾಡಿ, ನನ್ನ ಬೆಂಬಲಿಗರ ಮತಗಳನ್ನು ಕೊಡಿಸಿ, ಅವರ ಗೆಲುವಿಗೆ ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು.
ಮತ್ತೊಂದು ಅವಕಾಶ ನೀಡಿ : ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಈಗಾಗಲೇ ಮೂರು ವರ್ಷದ ಅವಧಿಗೆ ಅಧ್ಯಕ್ಷನಾಗಿ ಉತ್ತಮ ಸೇವೆ ಸಲ್ಲಿಸಿದ್ದೇನೆ.
ನಾನು ಅಧಿಕಾರ ವಹಿಸಿಕೊಂಡ ದಿನದಿಂದ ಕೋವಿಡ್-19 ವ್ಯಾಪಕವಾಗಿ ಹಬ್ಬಿತ್ತು. ಎರಡು ವರ್ಷಗಳ ಕಾಲ ಕೋವಿಡ್ ಸಂತ್ರಸ್ತರಿಗೆ ನೆರವು, ಕೋವಿಡ್‍ನಿಂದ ಮೃತಪಟ್ಟ 500ಕ್ಕು ಹೆಚ್ಚು ಮಂದಿಯನ್ನು ಅಂತ್ಯಕ್ರಿಯೆ ಮಾಡಿ, ಭಿಕ್ಷಕರು ಹಾಗೂ ದೂರದ ಊರುಗಳಿಂದ ಬಂದಿದ್ದವರಿಗೆ ಊಟದ ವ್ಯವಸ್ಥೆ ಮಾಡಿ, ಮಾನವೀಯ ಸೇವೆಯನ್ನು ಸಲ್ಲಿಸಿದ್ದೇನೆ. ನಂತರ ಸಿಕ್ಕ ಒಂದು ವರ್ಷದ ಅವಧಿಯಲ್ಲಿ ನೆನಗುದಿಗೆ ಬಿದ್ದಿದ್ದ ಬಸವ ಭವನ ನಿರ್ಮಾಣ, ಬಸವ ಪುತ್ಥಳಿಗೆ ನಿರ್ಮಾಣ ಚಾಲನೆ ಹಾಗೂ ಬಸವ ಭವನದ ಅಸ್ತಿ ವಿಚಾರ ನ್ಯಾಯಾಲಯದಲ್ಲಿದ್ದು, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದ್ದೇನೆ. ಈಗ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಪೂರ್ಣಗೊಳಿಸುವುದು, ಸಮುದಾಯದ ಅಭಿವೃದ್ದಿಗೆ ಮತ್ತೊಂದು ಅವಕಾಶವನ್ನು ನೀಡಬೇಕೆಂದು ಮೂಡ್ಲುಪುರ ನಂದೀಶ್ ಮನವಿ ಮಾಡಿದರು.
ಮಹಾಸಭಾದ ಮಾಜಿ ಅಧ್ಯಕ್ಷ ಕೋಡಸೋಗೆ ಶಿವಬಸಪ್ಪ ಮಾತನಾಡಿ, ಕಳೆದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿರುವ ಮೂಡ್ಲುಪುರ ನಂದೀಶ್ ಅವರಿಗೆ ಸಮಾಜದ ಬಂಧುಗಳು ಮತ್ತೊಂದು ಅವಕಾಶ ನೀಡಬೇಕು. ಅವರ ಅವಧಿಯಲ್ಲಿ ಸಮಾಜದ ಸಂಘಟನೆ ಹಾಗೂ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಸಮಾಜದ ಯಾವುದೇ ವಿಚಾರ ಬಂದರು ಪೊಲೀಸ್ ಠಾಣೆ, ಅಸ್ಪತ್ರೆ, ಸರ್ಕಾರಿ ಇಲಾಖೆಗಳು ಹಾಗೂ ಗ್ರಾಮಗಳಿಗೆ ತೆರಳಿ ಅವರಿಗೆ ಧೈರ್ಯ ತುಂಬಿ, ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಇಂಥವರಿಗೆ ಅವಕಾಶ ನೀಡಿದರೆ, ಇನ್ನು ಹೆಚ್ಚಿನ ಸೇವೆ ಮಾಡಲು ಸಿದ್ದರಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಮಾಜಿ ಸದಸ್ಯರಾದ ರಾಜಶೇಖರಮೂರ್ತಿ, ನಾಗನತ್ತ ಗುರುಮಲ್ಲಪ್ಪ, ಮುಖಂಡರಾದ ಭೃಂಗೇಶ್ ಕಟ್ಟೆ, ಬಸವನಪುರದ ಗೌಡಿಗೆ ರೇವÀಣ್ಣಸ್ವಾಮಿ ಇತರರು ಇದ್ದರು.