ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಿ: ಜಿಲ್ಲಾಧಿಕಾರಿ ಶಿಲ್ಪಾನಾಗ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.13-ಡೆಂಗ್ಯೂ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಲಾರ್ವ ಬೆಳವಣಿಗೆಯನ್ನು ತಡೆಯಲು ಸಾರ್ವಜನಿಕರು ಮನೆಯ ಸುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ನಗರದ ಹೌಸಿಂಗ್ ಬೋರ್ಡ್‍ನ 26ನೇ ವಾರ್ಡ್‍ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದ ಬಳಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಘಟಕದ ಸಂಯುಕ್ತಾಶ್ರಯದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ‘ಲಾರ್ವ ಸಮೀಕ್ಷೆ ಆಂದೋಲನ’ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡೆಂಗ್ಯೂ ನಿಯಂತ್ರಣ ಸರ್ಕಾರದ ಇಲಾಖೆಗಳ ಕೆಲಸ ಮಾತ್ರವಲ್ಲ. ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ. ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುವ ಈಡೀಸ್ ಸೊಳ್ಳೆಯಿಂದ ಡೆಂಗ್ಯೂ ರೋಗ ಉಲ್ಭಣವಾಗಲಿದೆ. ಜಿಲ್ಲೆಯಲ್ಲಿ ಜ್ವರ ಪ್ರಕರಣಗಳನ್ನು ಪರೀಕ್ಷಿಸಲಾಗಿ 65 ಪಾಸಿಟಿವ್ ಪ್ರಕರಣಗಳನ್ನು ಗುರುತಿಸಲಾಗಿತ್ತು. ಒಂದು ಪ್ರಕರಣ ಹೊರತುಪಡಿಸಿ ಉಳಿದ ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಲಾಗಿದೆ ಎಂದರು.
ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ನಾಗರಿಕರು ಮನೆಯ ಸುತ್ತಮುತ್ತ 2-3 ದಿನಗಳ ಕಾಲ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಸಂಗ್ರಹವಾದರೂ ಅದನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಪ್ರತಿ ಗ್ರಾಮಪಂಚಾಯಿತಿ, ನಗರಪ್ರದೇಶಗಳಲ್ಲಿ ಡೆಂಗ್ಯೂ ಕಾಯಿಲೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಬಯಲಿನಲ್ಲಿ ಅಥವಾ ಮನೆಯಲ್ಲಿ ನೀರು ಶೇಖರಣೆಯಾಗುವ ತೊಟ್ಟಿಗಳು, ಡ್ರಮ್, ಬ್ಯಾರೆಲ್, ಒಡೆದ ಬಾಟಲಿ, ಅನುಪಯುಕ್ತ ಟೈರುಗಳು, ಎಳೆನೀರಿನ ಚಿಪ್ಪುಗಳು, ಒಡೆದ ಬಾಟಲಿಗಳಲ್ಲಿ ನೀರು ಸಂಗ್ರಹವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಡೆಂಗ್ಯೂ ನಿಯಂತ್ರಣದಲ್ಲಿ ಎಲ್ಲರೂ ಸಹಕರಿಸಬೇಕು. ಪ್ರತಿ ಶುಕ್ರವಾರ ಅರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಆಯಾ ಭಾಗದ ಎಲ್ಲಾ ಮನೆಮನೆಗಳಿಗೂ ಭೇಟಿ ನೀಡಿ ಲಾರ್ವ ಸಮೀಕ್ಷೆಯನ್ನು ಆಂದೋಲನದ ಮಾದರಿಯಲ್ಲಿ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಸಾಮಾನ್ಯವಾಗಿ ವಯೋವೃದ್ಧರು, ಮಕ್ಕಳನ್ನೇ ಗುರಿಯಾಗಿಸುವ ಡೆಂಗ್ಯೂವನ್ನು ಹಗುರವಾಗಿ ಪರಿಗಣಿಸಬಾರದು. ದಿನಬಳಕೆಗಾಗಿ ಶೇಖರಣೆ ಮಾಡುವ ನೀರನ್ನು ಪ್ರತಿ ಮೂರು ದಿನಕ್ಕೊಮ್ಮೆ ಬದಲಾಯಿಸಿ ಇಟ್ಟುಕೊಳಬೇಕು. ಸಣ್ಣ ಜ್ವರ ಬಂದರೂ ಸರಿ, ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿ ಅವಶ್ಯ ಚಿಕಿತ್ಸೆ ಪಡೆಯಬೇಕು. ಆ ಮೂಲಕ ಡೆಂಗ್ಯೂ ನಿರ್ಮೂಲನೆಯಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ಮಾತನಾಡಿ ತೀವ್ರತರದ ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿ, ಮೈ ಕೈ ಹಾಗೂ ಕೀಲುಗಳಲ್ಲಿ ನೋವು, ವಿಪರೀತ ಬಾಯಾರಿಕೆ, ಇತ್ಯಾದಿ ಡೆಂಗ್ಯೂ ಜ್ವರ ಲಕ್ಷಣಗಲಾಗಿವೆ. ಡೆಂಗ್ಯೂನಿಂದ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಸೊಳ್ಳೆ ನಿರೋಧಕಗಳು, ಪರದೆಗಳನ್ನು ಬಳಸಬೇಕು. ಮೈತುಂಬಾ ಬಟ್ಟೆ ಧರಿಸಬೇಕು. ಮನೆಯ ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಕ ಜಾಲರಿಗಳನ್ನು ಅಳವಡಿಸಬೇಕು. ಹಗಲಿನಲ್ಲಿ ಮಲಗುವಾಗಲೂ ಸಹ ಸೊಳ್ಳೆ ಪರದೆಯಂತಹ ಸ್ವಯಂ ರಕ್ಷಣಾ ವಿಧಾನಗಳನ್ನು ಉಪಯೋಗಿಸಬೇಕು ಎಂದರು.
ಇದೇ ವೇಳೆ ಹೌಸಿಂಗ್ ಬೋರ್ಡ್ ನಿವಾಸಿಯೊಬ್ಬರ ಮನೆಗೆ ತೆರಳಿ ನೀರು ಸಂಗ್ರಹಿಸಿದ್ದ ಟ್ಯಾಂಕ್‍ನ್ನು ಪರೀಕ್ಷಿಸಿ ಲಾರ್ವ ಬೆಳವಣಿಗೆಯನ್ನು ವೀಕ್ಷಿಸಲಾಯಿತು. ಅದೇ ನೀರಿಗೆ ಟೆಮಿನಾಸ್ ಲಿಕ್ವಿಡ್ ಸಿಂಪಡಿಸಿ ನೆರೆದಿದ್ದ ಸಾರ್ವಜನಿಕರಿಗೆ ಡೆಂಗ್ಯೂ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಅಲ್ಲದೇ ಅಲ್ಲಿನ ನಿವಾಸಿಗಳು ನೀಡಿದ ಕುಡಿಯುವ ನೀರನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜೇಶ್‍ಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ನಗರಾಭಿವೃದ್ಧಿ ಕೋಶದ ಪ್ರಭಾರ ಯೋಜನಾ ನಿರ್ದೇಶಕರಾದ ರಾಮಚಂದ್ರ, ನಗರಸಭೆಯ ಪರಿಸರ ಎಂಜಿನಿಯರ್ ಗಿರಿಜಮ್ಮ, ಹಿರಿಯ ಆರೋಗ್ಯ ನಿರೀಕ್ಷರಾದ ಮಂಜುನಾಥ್, ನಾರಾಯಣಸ್ವಾಮಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ವೆಂಕಟೇಶ್, ಹಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ದ್ವಾರಕೀಶ್, ಆರೋಗ್ಯ ಅಧಿಕಾರಿಗಳು, ಇತರರು ಇದ್ದರು.