ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ :  ರಂಭಾಪುರಿ ಶ್ರೀ
ಸಂಜೆವಾಣಿ ವಾರ್ತೆ
ಹರಿಹರ.ಜು.೧೨; ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲ. ನೀತಿ ನಿಯಮ ಇಲ್ಲದ ಸಮಾಜ ಬೆಳೆಯಲಾಗದು. ಸತ್ಯ ಶುದ್ಧವಾದ ಧರ್ಮ ಪರಿಪಾಲನೆಯನ್ನು ಎಲ್ಲರೂ ಮಾಡಬೇಕು. ಧರ್ಮಾಚರಣೆ ನಿರ್ಲಕ್ಷö್ಯ ಮಾಡಿದರೆ ಅಪಾಯ ತಪ್ಪಿದ್ದಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು  ನಗರದ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಭಾಭವನದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಭೌತಿಕ ಜೀವನ ಸಮೃದ್ಧಗೊಂಡರೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕಾಗಿದೆ. ಅಂತರಂಗ ಮತ್ತು ಬಹಿರಂಗ ಶುದ್ಧಿಗೊಳಿಸಿಕೊಳ್ಳಲು ವೀರಶೈವ ಧರ್ಮದಲ್ಲಿ ಒತ್ತಿ ಹೇಳುತ್ತದೆ. ಜೀವನ ವಿಕಾಸಕ್ಕಾಗಿ ಧಾರ್ಮಿಕ ಮೌಲ್ಯಗಳ ಪರಿಪಾಲನೆ ಮಾಡುವ ಅವಶ್ಯಕತೆಯಿದೆ. ಶಿವನನ್ನು ಪೂಜಿಸಿದರೆ ಸಕಲ ದೇವಾನುದೇವತೆಗಳನ್ನು ಪೂಜಿಸಿದ ಫಲ ದೊರಕುತ್ತದೆ. ವೀರಶೈವ ಧರ್ಮದಲ್ಲಿ ಇಷ್ಟಲಿಂಗ ಪೂಜಾರಾಧನೆಯೊಂದಿಗೆ ಜೀವನ ಸಾಕ್ಷಾತ್ಕಾರ ಮಾಡಿಕೊಳ್ಳುವ ಅಗತ್ಯ ಬಹಳಷ್ಟಿದೆ. ಆಸಕ್ತಿ ಶ್ರದ್ಧೆವುಳ್ಳವರೆಲ್ಲರೂ ಗುರುವಿನ ಮೂಲಕ ಇಷ್ಟಲಿಂಗವನ್ನು ಪಡೆದು ಮೋಕ್ಷದಾಯಕವಾದ ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸಿ ಜೀವನ ಸಾರ್ಥಕಪಡಿಸಿಕೊಳ್ಳಬಹುದು. ಮಣಕೂರು ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡು ವೀರಶೈವ ಧರ್ಮ ಸಂಸ್ಕೃತಿಯ ಬಗ್ಗೆ ಬೋಧನೆ ಮಾಡಿದರು. ಲಕ್ಷ್ಮೇಶ್ವರದ ಕರೆವಾಡಿ ಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು. ಮೂರು ದಿನಗಳ ಕಾಲ ಹರಿಹರದಲ್ಲಿ ನಡೆದ ಸಮಾರಂಭ ತಮಗೆ ತೃಪ್ತಿ ಸಮಾಧಾನ ತಂದಿದೆ ಎಂದ ಅವರು ಕಾರ್ಯಕ್ರಮ ಯಶಸ್ವಿಗಾಗಿ ದೇವಸ್ಥಾನ ಸಮಿತಿ ಕಾರ್ಯಾಧ್ಯಕ್ಷ ಜುಂಜಪ್ಪ ಹೆಗ್ಗಪ್ಪನವರ ಕಾರ್ಯದರ್ಶಿ ಕೊಂಡಜ್ಜಿ ಪಂಚಾಕ್ಷರಿ ಮೊದಲ್ಗೊಂಡು ಸಮಿತಿಯ ಎಲ್ಲ ಸದಸ್ಯರು ಶ್ರಮಿಸಿದ್ದಾರೆಂದು ಹರುಷ ವ್ಯಕ್ತಪಡಿಸಿದರು. ನಗರದ ಭಕ್ತ ಸಮುದಾಯ ಸಹಕರಿಸಿ ಸೇವೆ ಸಲ್ಲಿಸಿರುವುದನ್ನು ಮರೆಯಲಾಗದೆಂದರು. ಇಷ್ಟಲಿಂಗ ಮಹಾಪೂಜೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಶೋಭೆ ತಂದರು.