ಜನಸಂಖ್ಯೆ ಹೆಚ್ಚಳದಿಂದ ಪರಿಸರ ಮೇಲೆ ದುಷ್ಪರಿಣಾಮ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೨; ಜನಸಂಖ್ಯೆ ಹೆಚ್ಚಳದಿಂದಾಗಿ ಪರಿಸರ ಮೇಲೆ ಹೆಚ್ಚಿನ ದುಷ್ಪಾರಿಣಾಮ ಬೀರಿದೆ ಎಂದು ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಎಂ ಕಾರಜೋಳ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.1987 ಜುಲೈ 11 ರಿಂದ ಇಡೀ ಪ್ರಪಂಚದಾದ್ಯಂತ ವಿಶ್ವ ಜನಸಂಖ್ಯೆ ದಿನಾಚರಣೆ ಆಚರಿಸಲಾಗುತ್ತಿದೆ. ಇಡೀ ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ.  ಜನಸಂಖ್ಯೆ ಸ್ಫೋಟದಿಂದ ಆಗುವ ಸಮಸ್ಯೆಗಳು ಬಹಳ ದೊಡ್ಡ ಪ್ರಮಾಣದಲ್ಲಿದೆ ಎಂದರು.  ಮನುಷ್ಯನ ಬೇಕು ಬೇಡಿಕೆಗಳನ್ನು ಈಡೇರಿಸಲುವ ಸಲುವಾಗಿ ನಾವು ಅರಣ್ಯವನ್ನು ನಾಶಪಡಿಸಲಾಗುತ್ತಿದೆ. ಕೆರೆ ಕಟ್ಟೆಗಳನ್ನು ಒತ್ತು ಮಾಡಲಾಗುತ್ತಿದೆ. ಭೂಮಿಯ ಮೇಲ್ಭಾಗದ ನೀರನ್ನು ಕಲುಷಿತಗೊಳಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರು ಸಿಗದೇ ಇರುವುದರಿಂದ ಪ್ರಪಂಚದಲ್ಲಿ ರೋಗರುಜಿನಗಳ ಸಂಖ್ಯೆ ಏರಿಕೆಯಾಗುತ್ತಿದೆ. ರೋಗ ಹರಡಲು ಮೂಲ ಕಾರಣವೇ ನೀರು. ಕುಡಿಯಲು ಶುದ್ಧವಾದ ನೀರು ಕೊಡದೇ ಇರುವುದರಿಂದ, ಮನುಷ್ಯದ ದುರಾಸೆಯಿಂದ ಭೂಮಿಯ ಮೇಲ್ಭಾಗದ ನೀರನ್ನು ಕಲುಷಿತಗೊಳಿಸಿದ ಪರಿಣಾಮ, ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆ ಮಾಡುವುದರಿಂದ ಜನರಿಗೆ ಶುದ್ಧವಾದ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಜಲಸಂಗ್ರಹಾರಗಳನ್ನು ಸ್ವಚ್ಛವಾಗಿ ಹಾಗೂ ಸುರಕ್ಷಿತವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರುಅಂಕಿ ಅಂಶಗಳ ಮಾಹಿತಿ ಪ್ರಕಾರ ದೇಶದಲ್ಲಿ ಪ್ರತಿ ನಿಮಿಷಕ್ಕೆ 46 ಮಕ್ಕಳು ಜನಿಸುತ್ತಾರೆ. ಒಂದು ದಿನಕ್ಕೆ 67 ಸಾವಿರ ಮಕ್ಕಳು ಜನಿಸುತ್ತಾರೆ. ಜನಸಂಖ್ಯೆ ಸ್ಫೋಟದಿಂದಾಗಿ ಶಿಕ್ಷಣದ ಸಮಸ್ಯೆ, ಬಡತನ ಹೆಚ್ಚಳ, ವಸತಿ, ಸಾರಿಗೆ ಸಮಸ್ಯೆ ಆಗಲಿದೆ. ಹಾಗಾಗಿ ಜನಸಂಖ್ಯೆ ನಿಯಂತ್ರಣ ಅವಶ್ಯಕ ಹಾಗೂ ಅಗತ್ಯವಾಗಿದೆ. ಜನಸಂಖ್ಯೆ ದಿನಾಚರಣೆ ಕೇವಲ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯಕೀಯ, ಅರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೇ ಸಾರ್ವಜನಿಕ ಸಹಭಾಗಿತ್ವದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾಥಾ ಕಾರ್ಯಕ್ರಮ ನಡೆಸಿ, ಅರಿವು ಮೂಡಿಸಬೇಕು ಎಂದು ಹೇಳಿದರು.
ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿ: ಮಳೆ ನೀರು ಕೊಯ್ಲು ಪ್ರತಿಯೊಂದು ಮನೆಯಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಸಲಹೆ ನೀಡಿದರು.  
ಇನ್ನೂ ಮುಂದೆ ಮನೆ ನಿರ್ಮಾಣಕ್ಕೆ ಅನುಮತಿ ನೀಡುವ ಮೊದಲು ಕಡ್ಡಾಯವಾಗಿ ಮಳೆ ನೀರು ಕೊಯ್ಲ ಅಳವಡಿಸಿಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ, ಮನೆ ನಿರ್ಮಾಣಕ್ಕೆ ಅನುಮತಿ ನೀಡಬೇಕು. ಮಳೆ ನೀರು ಸ್ವಚ್ಛ ಹಾಗೂ ಶುದ್ಧವಾಗಿದ್ದು, ಕುಡಿಯಲು ಬಹಳ ಯೋಗ್ಯವಾದ ನೀರು. ಭೂಮಿ ಮೇಲ್ಭಾಗದಲ್ಲಿ ನೀರು ಹಿಡಿದಿಡಲು ನಾವು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಜನಸಂಖ್ಯೆ ವೃದ್ಧಿಯಾಗುತ್ತಲೇ ಇದೆ. ಆದರೆ ಭೂಮಿ ಇದ್ದಷ್ಟೇ ಇದೆ. ಜನಸಂಖ್ಯಾ ಹೆಚ್ಚಳದಿಂದ ಮೂಲಭೂತ ಸೌಕರ್ಯಗಳಿಗೆ ತೊಂದರೆಯಾಗುವುದಲ್ಲದೇ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಖ್ಯವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ. ಜನಸಂಖ್ಯೆಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ, ಆದರೆ ನಿಯಂತ್ರಿಸಬಹುದು. ಈ ಹಿನ್ನಲೆಯಲ್ಲಿ ಸರ್ಕಾರವು ಕುಟುಂಬ ಕಲ್ಯಾಣ ಯೋಜನೆಗಳಂತಹ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಬಹುದಾಗಿದೆ. ಇದೆಲ್ಲದಕ್ಕೂ ಶೈಕ್ಷಣಿಕ ಕೊರತೆ ಮುಖ್ಯ ಕಾರಣ. ಆದ್ದರಿಂದ ಬಹುಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಿದರೆ ಜನಸಂಖ್ಯೆಯನ್ನು ಸುಧಾರಿಸಬಹುದು ಎಂದು ಹೇಳಿದರು.ಜಿಲ್ಲೆಯ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲ್ಲೂಕುಗಳಲ್ಲಿ ಬಾಲ ಗರ್ಭಿಣಿಯರು ಕಂಡು ಬರುತ್ತಿರುವುದು ಅಮಾನವೀಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಈ ಬಗ್ಗೆ ಗಮನಹರಿಸಬೇಕು. ಜನಸಂಖ್ಯೆಯು ನಿಯಂತ್ರಣದಲ್ಲಿದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಜನಸಂಖ್ಯಾ ನಿಯಂತ್ರಣದ ಕುರಿತು ಅರಿವು ಮೂಡಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದರು.