ಜಗಳೂರು ತಾಲ್ಲೂಕು ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ;  ಸಚಿವ ದಿನೇಶ್ ಗುಂಡೂರಾವ್..
ಸಂಜೆವಾಣಿ ವಾರ್ತೆ
ಜಗಳೂರು.ಜು.೧೨:- ಪಟ್ಟಣದ ಮಧ್ಯಭಾಗದಲ್ಲಿರುವ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಹಳೆ ಕಟ್ಟಡವನ್ನು ತೆರವುಗೊಳಿಸಿ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ  ಶಾಸಕ ಬಿ. ದೇವೇಂದ್ರಪ್ಪ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಆಸ್ಪತ್ರೆ ಬಹಳ ಕೆಟ್ಟ ಸ್ಥಿತಿಯಲ್ಲಿದೆ. ಎರಡೂ ಕಟ್ಟಡಗಳು ಹಾಳಾಗಿವೆ. ಹೊಸ ಕಟ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನದ ಅಗತ್ಯ ಇದೆ. ಕಟ್ಟಡ ನಿರ್ಮಾಣವಾಗಬೇಕಿರುವ ಜಾಗದ ಬಗ್ಗೆ ಸ್ಥಳೀಯವಾಗಿ ಶಾಸಕರ ನೇತೃತ್ವದಲ್ಲಿ ನಿರ್ಧಾರ ಕೈಗೊಳ್ಳಿ. ಪಟ್ಟಣದ ಹೊರ ವಲಯದಲ್ಲಿ ವಿಶಾಲವಾದ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕೋ ಅಥವಾ ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಿ ಅಲ್ಲೇ ಕಟ್ಟಡ ಕಟ್ಟಬೇಕೋ ಎಂಬ ಬಗ್ಗೆ ಮೊದಲು ನಿರ್ಧಾರ ಮಾಡಿ. ಸರ್ಕಾರದಿಂದ ನೂತನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಸಚಿವರು ಹೇಳಿದರು.ಇಲ್ಲಿನ ಆಸ್ಪತ್ರೆಯಲ್ಲಿ ಖಾಲಿ ಇರುವ ಫಿಜಿಷಿಯನ್ ಹುದ್ದೆ ಸೇರದಂತೆ ಎಲ್ಲಾ ವೈದ್ಯರ ನೇಮಕ ಮಾಡಲಾಗುವುದು. ಪಟ್ಟಣದ ಆಸ್ಪತ್ರೆ ಪಕ್ಕದಲ್ಲಿರುವ ವೈದ್ಯರ ವಸತಿಗೃಹದ ಆವರಣವನ್ನು ರೂ.65 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 30 ಆರೋಗ್ಯ ಉಪ ಕೇಂದ್ರ ಕೇಂದ್ರಗಳನ್ನು ಸ್ಥಾಪಿಸಲಾಗು ವುದು. ಪ್ರತಿ ಕೇಂದ್ರಕ್ಕೆ ರೂ.65 ಲಕ್ಷ ಅನುದಾನ ಮಂಜೂರು ಮಾಡಲಾಗುತ್ತದೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಎಂ.ಆರ್.ಐ. ಸ್ಕ್ಯಾನ್ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.ದಶಕಗಳಷ್ಟು ಹಳೆಯದಾದ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಅವರ ಮನವಿ ಮೇರೆಗೆ ಇಂದು ಇಲ್ಲಿಗೆ ಬಂದಿದ್ದೇನೆ. ನಿಜಕ್ಕೂ ಆಸ್ಪತ್ರೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ ಎಂದರು.ಜಗಳೂರು ತಾಲ್ಲೂಕು ಮಾತ್ರವಲ್ಲದೆ, ಪಕ್ಕದ ಕೂಡ್ಲಿಗಿ, ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳಿಂದಲೂ ನಿತ್ಯ ನೂರಾರು ರೋಗಿಗಳು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಧಾವಿಸುತ್ತಾರೆ. ಹಿಂದುಳಿದ ಪ್ರದೇಶವಾದ ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆರೋಗ್ಯ ಸಚಿವರು ಬಹಳ ತಾಳ್ಮೆಯಿಂದ ವಿವರವಾಗಿ ನೋಡಿದ್ದಾರೆ. ನೂತನನವಾದ, ಸುಸಜ್ಜಿತ ಮಾದರಿಯ ಆಸ್ಪತ್ರೆ ನಿರ್ಮಾಣಕ್ಕೆ ಸಚಿವರು ಸ್ಪಂದಿಸಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಮನವಿ ಮಾಡಿದರು.ಆಸ್ಪತ್ರೆಯಲ್ಲಿ ಲಕ್ಷಾಂತರ ರೂ ವೆಚ್ಚದಲ್ಲಿ ಹೈಟೆಕ್ ಪ್ರಯೋಗಾಲ ಯ ಇದ್ದರೂ ಬಳಕೆಯಾಗುತ್ತಿಲ್ಲ.ರಕ್ತ ಶೇಖರಣಾ ಘಟಕ ಇಲ್ಲ. ಆಕ್ಸಿಜನ್ ಘಟಕ ಇದ್ದೂ ಇಲ್ಲದಂತಿದೆ. ವೆಂಟಿಲೇಟರ್ ಗಳು ಬಳಕೆಯಾಗುತ್ತಿಲ್ಲ.ಜಿಲ್ಲಾ ಆರೋಗ್ಯಾಧಿಕಾರಿ ಇಲ್ಲಿಗೆ ಭೇಟಿ ಕೊಡುವುದಿಲ್ಲ. ಆಸ್ಪತ್ರೆ ಸಮಸ್ಯೆಗಳ ಆಗರವಾಗಿದೆ ಎಂದು ಎಂದು ಸಾರ್ವಜನಿಕರು ಸಚಿವರಿಗೆ ದೂರು ಸಲ್ಲಿಸಿದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಆಯುಕ್ತ ರಣದೀಪ್, ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಧಾನ ವ್ಯವಸ್ಥಾಪಕ ನವೀನ್ ಭಟ್, ಡಿ.ಎಚ್.ಒ ಡಾ. ಷಣ್ಮಖಪ್ಪ, ತಹಶೀಲ್ದಾರ್ ಸೈಯದ್ ಕಲೀಂ ಮುಲ್ಲಾ.ಟಿ.ಎಚ್.ಒ ಡಾ.ವಿಶ್ವನಾಥ್, ಆಡಳಿತಾಧಿಕಾರಿ ಡಾ. ಷಣ್ಮುಖಪ್ಪ.ಕೆಪಿಸಿಸಿ‌ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಕೆ.ಪಿ.ಸಿ.ಸಿ ಎಸ್ ಟಿ‌ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್,ಎಸ್.ಮಂಜು ನಾಥ್,ಮುಖಂಡರಾದ ಸುರೇಶ್ ಗೌಡ,ಬಿ ಮಹೇಶ್ವರಪ್ಪ, ತಿಮ್ಮಣ್ಣ.ಮಂಜುನಾಥ್.ಒಮಣ್ಣ. ಹಟ್ಟಿ ತಿಪ್ಪೇಸ್ವಾಮಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರು ಇದ್ದರು.