ನಾಡಿನ ಏಕೀಕರಣಕ್ಕೆ ಆಲೂರು ವೆಂಕಟರಾಯರ ಕೊಡುಗೆ ಅವಿಸ್ಮರಣೀಯ
ಕಲಬುರಗಿ:ಜು.12: ನಮ್ಮ ಕನ್ನಡ ನಾಡಿಗೆ ತನ್ನದೇ ಆದ ಭವ್ಯವಾದ ಇತಿಹಾಸ, ಪರಂಪರೆ ಇದೆ. ನಾನಾ ಭಾಗಗಳಾಗಿ ಹರಿದು ಹಂಚಿ ಹೋಗಿದ್ದ ನಾಡನ್ನು, ಅಖಂಡವಾಗಿ ಏಕೀಕರಣಗೊಳಿಸಲು ನಿರಂತರವಾಗಿ ಶ್ರಮಿಸಿದ ಆಲೂರು ವೆಂಕಟರಾಯರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಆಲೂರು ವೆಂಕಟರಾಯರ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
‘ಕನ್ನಡದ ಕುಲಪುರೋಹಿತ’ ಎಂಬ ನಾಮಾಂಕಿತದ ಆಲೂರು ವೆಂಕಟರಾಯರು, ಕನ್ನಡ ನಾಡಿನ ಉದಯಕ್ಕೆ ನಿರಂತರವಾಗಿ ಶ್ರಮಿಸಿದ್ದಾರೆ. ಕನ್ನಡ ನೆಲದಲ್ಲಿರುವ ಎಲ್ಲರೂ ಒಂದೆಯೆಂದು ಸಾರಿ, ಪ್ರತಿಯೊಬ್ಬರಲ್ಲಿ ನಾಡಿನ ಉದಯದ ಬಗ್ಗೆ ಜಾಗೃತಿಯನ್ನು ಉಂಟುಮಾಡುವ ಮೂಲಕ ನಾಡಿನ ಹುಟ್ಟಿಗೆ ಸಾಕಷ್ಟು ಶ್ರಮಿಸಿದ್ದಾರೆ. ವೆಂಕಟರಾಯರು ಅಪ್ಪಟ ಕನ್ನಡಾಭಿಮಾನಿ, ಮಾನವತವಾದಿ, ಸರಳ ಜೀವಿಯಾಗಿದ್ದರು. ಕನ್ನಡಿಗರಲ್ಲಿ ಸ್ವಾಭಿಮಾನವನ್ನು ಜಾಗೃತಗೊಳಿಸಿದ ಮೇರು ವ್ಯಕ್ತಿ. ಇಂತಹ ಮಹನೀಯರ ಬಗ್ಗೆ ತಿಳಿದುಕೊಂಡು ನಾಡು-ನುಡಿಯ ಸೇವೆ ಮಾಡಬೇಕು ಎಂದರು.
ಪ್ರಮುಖರಾದ ಅಸ್ಲಾಂ ಶೇಖ್, ಸಯಯದ್ ಹಮೀದ್ ನಿಲೊಫರ್ ಶೇಖ್ ಹಾಗೂ ವಿದ್ಯಾರ್ಥಿಗಳು ಇದ್ದರು.