ಜಿಲ್ಲೆಯಲ್ಲಿ ಡೆಂಗೀ ನಿಯಂತ್ರಣ, ನಿರ್ಮೂಲನೆಗೆ ಕ್ರಮವಹಿಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೩: ಜಿಲ್ಲೆಯಲ್ಲಿ ಡೆಂಗೀ ನಿಯಂತ್ರಣ ಹಾಗೂ ನಿರ್ಮೂಲನೆಗೆ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಡೆಂಗಿ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಡೆಂಗೀಯನ್ನು ಹತೋಟಿಯಲ್ಲಿಟ್ಟುಕೊಂಡು, ಯಾವುದೇ ಕಾರಣಕ್ಕೂ ಡೆಂಗೀಯಿಂದ ಸಾವು ಸಂಭವಿಸಬಾರದು. ಹಾಗಾಗಿ ಡೆಂಗೀ ನಿಯಂತ್ರಣಕ್ಕೆ ಅಗತ್ಯ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡು, ಅಧಿಕಾರಿಗಳು ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.15 ದಿನದೊಳಗೆ ಲಾರ್ವಾ ಸಮೀಕ್ಷೆ ಪೂರ್ಣಗೊಳಿಸಿ: ಜಿಲ್ಲೆಯ  ಗ್ರಾಮೀಣ ಮತ್ತು ನಗರದ ಪ್ರದೇಶಗಳಲ್ಲಿ ಸ್ವಯಂ ಸೇವಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿ 15 ದಿನದೊಳಗೆ ಲಾರ್ವಾ ಸಮೀಕ್ಷೆ ಪೂರ್ಣಗೊಳಿಸಬೇಕು. ಲಾರ್ವಾ ಸಮೀಕ್ಷೆ ಜೊತೆಗೆ ಡೆಂಗೀ ಕುರಿತು ಮಾಹಿತಿ ಶಿಕ್ಷಣ ನೀಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.ವಾರಕ್ಕೆ ಒಂದು ದಿನ ಪ್ರತಿ ಶುಕ್ರವಾರ “ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನ” ನಡೆಯುತ್ತಿದ್ದು, ಮಳೆಗಾಲದ ಹಿನ್ನಲೆಯಲ್ಲಿ ಪ್ರತಿ ಶುಕ್ರವಾರದ ಜತೆಗೆ ಪ್ರತಿ ಮಂಗಳವಾರವೂ ಲಾರ್ವಾ ಸರ್ವೆ ಕಾರ್ಯ  ಮಾಡಬೇಕು. ಜಿಲ್ಲೆಯಲ್ಲಿ ಡೆಂಗೀ ಹಾಟ್‍ಸ್ಪಾಟ್‍ಗಳನ್ನು ಗುರುತಿಸಬೇಕು. ಹಾಟ್‍ಸ್ಪಾಟ್‍ಗಳ್ಲಲಿ 100 ಮೀಟರ್ ಸುತ್ತ ಲಾರ್ವಾ ಸಮೀಕ್ಷೆ ನಡೆಸಬೇಕು. ಹಾಟ್‍ಸ್ಪಾಟ್‍ಗಳಲ್ಲಿ ಪರಿಣಾಮಕಾರಿಯಾಗಿ ಫಾಗಿಂಗ್ ಕಾರ್ಯ ನಡೆಯಬೇಕು. ಇದರಿಂದ ಡೆಂಗಿ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದರು.ಸಾರ್ವಜನಿಕರಿಗೆ ಅರಿವು ಮೂಡಿಸಿ: ಡೆಂಗೀ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದ್ದು, ಡೆಂಗೀ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಡೆಂಗೀ ನಿಯಂತ್ರಣ ಕುರಿತು ನಗರ ಸ್ಥಳೀಯ ಸಂಸ್ಥೆಗಳ ಕಸದ ವಾಹನಗಳಲ್ಲಿ ಆಡಿಯೋ ಜಿಂಗಲ್ಸ್ ಹಾಗೂ ಆಟೋ ಪ್ರಚಾರದ ಮೂಲಕ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂರು ದಿನಕೊಮ್ಮೆ ಡಂಗೂರ ಸಾರಿಸಿ, ಜನರಿಗೆ ಅರಿವು ಮೂಡಿಸಬೇಕು. ಶಾಲೆಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಐದು ನಿಮಿಷಗಳ ಕಾಲ ಡೆಂಗೀ ಕುರಿತು ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.ಡೆಂಗೀ ಟೆಸ್ಟ್ ಹೆಚ್ಚಳ ಮಾಡಬೇಕು. ಇದರ ಆಧಾರದ ಮೇಲೆ ಲಾರ್ವಾ ನಾಶ ಮಾಡಲು ಯೋಜನೆ ರೂಪಿಸಿಕೊಳ್ಳಬೇಕು. ಡೆಂಗೀ ಚಿಕಿತ್ಸೆಗೆ ಅಗತ್ಯವಾಗಿ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್,  ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಆರೋಗ್ಯ ಇಲಾಖೆಯ ಡಾ.ಕಾಶೀ, ಡಾ.ಚಂದ್ರಶೇಖರ್ ಕಂಬಾಳಿ ಮಠ್, ಡಾ.ಅಭಿನವ್, ಡಾ.ರೇಖಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.