ಅಭಿವೃದ್ಧಿ ಯೋಜನೆಗಳ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೩; ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಇರುವ ಯೋಜನೆಗಳ ಕುರಿತು ಪ್ರಸ್ತಾವನೆ ಸಿದ್ದಪಡಿಸಿ, ಕೇಂದ್ರ ಸರ್ಕಾರದ ಹಿಂಬಾಲು ಬಿದ್ದು,  ಅಭಿವೃದ್ಧಿ ಯೋಜನೆಗಳಿಗೆ ಅನುದಾನ ತರುತ್ತೇನೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.  ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಜರುಗಿದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಹಿಂದೆ ರಾಜ್ಯದಲ್ಲಿ ಸಣ್ಣ ನೀರಾವರಿ ಸಚಿವನಾಗಿದ್ದಾಗ, ರಾಜ್ಯ ಸರ್ಕಾರ ಇಲಾಖೆಗೆ ರೂ.400 ರಿಂದ 500 ಕೋಟಿ ಅನುದಾನ ಮೀಸಲು ಇರಿಸುತ್ತಿತ್ತು. ಆದರೆ ಸಣ್ಣ ನೀರಾವರಿ ಕಾಮಗಾರಿಗಳಿಗೆ ಕೇಂದ್ರದಿಂದ ಪ್ರತಿ ವರ್ಷ ರೂ.2000 ಕೋಟಿಯಷ್ಟು ಅನುದಾನ ತಂದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದೇನೆ. ಈಗ ಸಂಸದನಾಗಿ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆ ಮಂತ್ರಿಗಳ ಬೆನ್ನು ಬಿದ್ದು ಅನುದಾನ ತರುವುದೇ ನನ್ನ ಕೆಲಸವಾಗಿದೆ. ರಾಜ್ಯ ಸರ್ಕಾರದಿಂದ ಅನುಪಾತದ ಹಂಚಿಕೆ ಆಧಾರದ ಮೇಲೆ ಹಾಗೂ ಪೂರ್ಣ ಪ್ರಮಾಣದಲ್ಲಿ ಕೇಂದ್ರ ಸರ್ಕಾರದಿಂದ ಬರುವ ಯೋಜನೆಗಳಿಗೆ ಇಲಾಖೆವಾರು ಪ್ರಸ್ತಾವನೆ ಸಿದ್ಧಪಡಿಸುವಂತೆ ಸಂಸದ ಗೋವಿಂದ ಎಂ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿತ್ರದುರ್ಗ ಜಿಲ್ಲೆಯಲ್ಲಿ ನದಿಗಳು ಇಲ್ಲದೆ ಇರುವುದರಿಂದ ಮಳೆಯ ನೀರಿನ ಮೇಲೆಯೇ ಹೆಚ್ಚಿನ ಅವಲಂಬನೆ ಆಗಬೇಕಿದೆ. ಅದಕ್ಕಾಗಿ ಅಧಿಕಾರಿಗಳು ಹೆಚ್ಚು ಚೆಕ್ ಡ್ಯಾಂ, ನಾಲಾ ಬಂಡ್, ಬ್ಯಾರೇಜ್‍ಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ಬಗ್ಗೆ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಸರ್ವೇ ನಡೆಸಿ ಯೋಜನೆ ಸಿದ್ದಪಡಿಸಬೇಕು. ಇದರ ಜೊತೆಗೆ ಮಳೆ ನೀರು ಕೋಯ್ಲು ಮಾಡಲು ಸಹ ಪ್ರಯತ್ನಿಸಬೇಕು. ಹೊಸ ಮನೆಗಳ ನಿರ್ಮಾಣದ ಸಂದರ್ಭದಲ್ಲಿ ಮಳೆ ನೀರು ಕೋಯ್ಲು ನಿರ್ಮಾಣ ಮಾಡಲು ನಿಯಮ ರೂಪಿಸಬೇಕು. ಇದರಿಂದ ಮನೆಗೆ ಅಗತ್ಯವಾದ ನೀರು ಲಭ್ಯವಾಗುತ್ತದೆ. ಮಳೆ ನೀರು ಶುದ್ಧವಾಗಿದ್ದು, ಕುಡಿಯಲು ಹಾಗೂ ದಿನ ಬಳಕೆಗೂ ಅನುಕೂಲವಾಗುತ್ತದೆ. ಈ ಬಗ್ಗೆ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮನೆ ಕಟ್ಟಲು ಪರವಾನಿಗೆ ನೀಡುವಾಗ ಇದನ್ನು ಕಡ್ಡಾಯ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು