ಬಿ.ವೈ. ವಿಜಯೇಂದ್ರ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ
ಕಲಬುರಗಿ:ಜು.12:ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಬಂಧಿಸಿದ್ದನ್ನು ಖಂಡಿಸಿ ಶುಕ್ರವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ್, ಮಹಾಪೌರ ವಿಶಾಲ್ ದರ್ಗಿ ಮುಂತಾದವರು ಮಾತನಾಡಿ, ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿಯ ಹೆಸರಿದ್ದು, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಮೂಡಾ ಹಗರಣವನ್ನು ಸಮರ್ಪಕವಾಗಿ ತನಿಖೆ ಕೈಗೊಳ್ಳದೇ ರಾಜ್ಯ ಸರ್ಕಾರವು ಮುಚ್ಚಿ ಹಾಕುತ್ತಿದೆ. ಇದನ್ನು ಖಂಡಿಸಿ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡರೆ ಪ್ರತಿಭಟನೆಯನ್ನು ರಾಜ್ಯ ಸರ್ಕಾರವು ಹತ್ತಿಕ್ಕಲು ಅವರನ್ನು ಬಂಧಿಸಿದೆ ಎಂದು ಅವರು ಆರೋಪಿಸಿದರು.
ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜೀನಾಮೆ ಕೊಡುವವರೆಗೂ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಅವರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶಿವಯೋಗಿ ತಳವಾರ್, ಧರ್ಮಣ್ಣ ಇಟಗಾ, ಉಮೇಶ್ ಪಾಟೀಲ್, ಶೋಭಾ ಪಾಟೀಲ್, ಮಹಾದೇವ್ ಬೆಳಮಗಿ, ಸಂತೋಷ್ ಹಾದಿಮನಿ, ಪ್ರವೀಣ್ ತೆಗನೂರ್, ಶರಣು ಸಜ್ಜನ್, ಶಿವಲಿಂಗ್ ಪಾಟೀಲ್, ನಾಗರಾಜ್ ಮಹಾಗಾಂವಕರ್ ಮುಂತಾದವರು ಪಾಲ್ಗೊಂಡಿದ್ದರು.