ಪೊಲೀಸ್ ವಶದಲ್ಲಿದ್ದ ಆರೋಪಿ ಪರಾರಿ
ಕಲಬುರಗಿ,ಜು.12-ಪೊಲೀಸ್ ವಶದಲ್ಲಿದ್ದ ಆರೋಪಿಯೊಬ್ಬ ತಪ್ಪಿಸಿಕೊಂಡು ಓಡಿ ಹೋಗಿರುವ ಘಟನೆ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಹತ್ತಿರವಿರುವ ಸರ್ಕಾರಿ ಬಾಲಕರ ವೀಕ್ಷಣಾಯಲಯದ ಹತ್ತಿರ ನಡೆದಿದೆ.
ಕಾಳಗಿ ತಾಲ್ಲೂಕಿನ ರಾಮನಗರ ಕೂಡ್ಲಿ ತಾಂಡಾದ ಅಶೋಕ ಲೋಕು ಪವಾರ್ (40) ಎಂ¨ ಆರೋಪಿಯೇ ಪೊಲೀಸ್ ವಶದಿಂದ ತಪ್ಪಿಸಿಕೊಂಡು ಹೋಗಿದ್ದು, ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆ ಪೇದೆ ಮಂಜುನಾಥ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಪ್ರಕರಣದ ವಿವರ
ಚಿಂಚೋಳಿ ತಾಲ್ಲೂಕಿನ ಕೋಕು ನಾಯಕ ತಾಂಡಾದ ಸುನಿತಾ ಪ್ರೇಮಸಿಂಗ್ ರಾಠೋಡ್ ಅವರು ನೀಡಿದ ದೂರಿನ ಮೇರೆಗೆ ಚಿಂಚೋಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕಾಳಗಿ ತಾಲ್ಲೂಕಿನ ರಾಮನಗರ ಕೂಡ್ಲಿ ತಾಂಡಾದ ಅಶೋಕ ಲೋಕು ಪವಾರ್ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಿದ್ದರು. ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಹತ್ತಿರವಿರುವ ಸರ್ಕಾರಿ ಬಾಲಕರ ವೀಕ್ಷಣಾಲಯಕ್ಕೆ ಒಪ್ಪಿಸಲು ಕರೆದುಕೊಂಡು ಬಂದಿದ್ದರು. ಈ ವೇಳೆ ಆರೋಪಿ ಅಶೋಕ ಲೋಕು ಪವಾರ ಪೇದೆಗಳಾದ ಮಂಜುನಾಥ ಮತ್ತು ಕಾಶಿಲಿಂಗ ಅವರನ್ನು ತಳ್ಳಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಈ ಸಂಬಂಧ ಪೇದೆ ಮಂಜುನಾಥ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಟೇಷನ್ ಬಜಾರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.