ಫಸಲ್ ಬಿಮಾ ಯೋಜನೆಯ ಪರಿಹಾರದಲ್ಲಿ ರೈತರಿಗೆ ಮೋಸ: ತನಿಖೆಗೆ ಅಖಂಡ ರೈತ ಸಂಘ ಒತ್ತಾಯ
ವಿಜಯಪುರ,ಜು.12: ಫಸಲ್ ಬಿಮಾ ಯೋಜನೆಯ ಪರಿಹಾರದಲ್ಲಿ ರೈತರಿಗೆ ಮೋಸವಾಗಿದ್ದು ತನಿಖೆ ಮಾಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪದಾಧಿಕಾರಿಗಳು ಕೃಷಿ ಇಲಾಖೆ ಆಯುಕ್ತÀ ವೈ.ಎಸ್. ಪಾಟೀಲ ಅವರಿಗೆ ಬೆಂಗಳೂರಿನ ಶೇಷಾಧ್ರಿ ರಸ್ತೆಯಲ್ಲಿರುವ ಕೃಷಿ ಆಯುಕ್ತಾಲಯದ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅರವಿಂದ ಕುಲಕರ್ಣಿ ಮಾತನಾಡಿ, ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾಳಾದ ಸಂದರ್ಭದಲ್ಲಿ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿದೆ. ಆದರೆ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡದೆ ಮೋಸ ಮಾಡಲಾಗುತ್ತಿದೆ. 2023-24 ನೇ ಸಾಲಿನಲ್ಲಿ ತೊಗರಿ ಬೆಳೆಯ ಹಣವನ್ನು ರೈತರಿಗೆ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದ್ದರ ಹಿನ್ನೆಲೆ ವಿಜಯಪುರ ಜಿಲ್ಲೆಗೆ ಒಟ್ಟು 85.50 ಕೋಟಿ ಹಣ ನೀಡಲಾಗಿದೆ ಎಂದು ಫೆ. 22 ರಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದರು. ಅದರಂತೆ ರೈತರಿಗೆ ಅಲ್ಪಸ್ವಲ್ಪ ಪರಿಹಾರ ಹಣ ಬಂದಿದೆ. ಆದರೆ ಇನ್ನುಳಿದ ಶೇ. 15ರಷ್ಟು ಪರಿಹಾರ ಹಣ 4 ತಿಂಗಳು ಕಳೆದರೂ ಇನ್ನು ಬಂದಿಲ್ಲ . ಅಂತಹದರಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ತುಂಬಿಸಿಕೊಳ್ಳಲಾಗುತ್ತಿದೆ. ಇದನ್ನು ಗಮನಿಸಿದರೆ ರಾಜ್ಯದ ರೈತರಿಗೆ ವಿಮಾ ಕಂಪನಿ ಹಾಗೂ ಸರ್ಕಾರ ಎರಡೂ ರೈತರಿಗೆ ಮೋಸ ಮಾಡುತ್ತಿವೆ. ಈಗ ರೈತರು ವಿಮೆ ಹಣ ತುಂಬಬೇಕೋ ಬೇಡವೋ ಎಂಬ ಗೊಂದಲದಲ್ಲಿ ಇದ್ದಾರೆ. ವಿಮಾ ಪರಿಹಾರ ಹಣ ಜಮಾಯಿಸುವುದರಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಸಂದೇಹವಿದೆ. ಇದನ್ನು ತನಿಖೆಗೆ ಒಳಪಡಿಸಬೇಕು ಎಂದು ಕೇಳಿಕೊಂಡರು.
ಹಾನಿಗೊಳಗಾದ ತೊಗರಿ ಬೆಳೆ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯತ ಸಿಬ್ಬಂದಿ ಸೇರಿದಂತೆ ರೈತರ ಸಮಕ್ಷಮ ಬೆಳೆ ಕಟಿಂಗ್ ಮಾಡಿ ಹಾನಿ, ಪ್ರಮಾಣ ಲೆಕ್ಕ ಹಾಕಬೇಕು. ಆದರೆ ಯಾವ ಮಾನದಂಡದಲ್ಲಿ ಪರಿಹಾರ ನೀಡಿದ್ದಾರೆ ಎಂಬುದು ಸ್ಪಷ್ಟ ಪಡಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳನ್ನು ಕೇಳಿದರೆ ಅದರ ಬಗ್ಗೆ ನಮಗೆ ಗೊತ್ತಿಲ್ಲ ಶೇ. 90 ರಷ್ಟು ಹಾನಿ ಬರೆದುಕೊಂಡು ಹೋಗಿದ್ದಾರೆಂದು ನುಣಿಚಿಕೊಳ್ಳುತ್ತಿದ್ದಾರೆ. ಒಟ್ಟಾರೆ ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳು ಶಾಮೀಲಾಗಿ ವಿಮಾ ಕಂಪನಿಗೆ ಲಾಭ ಮಾಡಿಕೊಡುತ್ತಿದ್ದು ಒಂದು ರೀತಿ ವಿಮಾ ಕಂಪನಿ ಮಟಕಾ ದಂಧೆ ನಡೆಸುವ ಅಡ್ಡೆ ಆಗಿದೆ. ಆದ್ದರಿಂದ ಈ ಕುರಿತು ಸಂಪೂರ್ಣ ತನಿಖೆ ಮಾಡಿ ರೈತರಿಗೆ ಬರಬೇಕಾದ ಉಳಿದ ವಿಮಾ ಹಣವನ್ನು ಜಮೆ ಮಾಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಪಾಂಡು ಹ್ಯಾಟಿ, ವಿಠಲ ಬಿರಾದಾರ, ಹೊನಕೆರೆಪ್ಪ ತೆಲಗಿ, ಮಲಗೆಪ್ಪ ಸಾಸನೂರ, ಲಾಲಸಾಬ ಹಳ್ಳೂರ, ಬಸಪ್ಪ ತೋಟದ, ಮುದನೂರ ಬಿ. ಗ್ರಾಮದ ಜಯ ಕರ್ನಾಟಕ ಸಂಘಟನೆ ಹುಣಸಗಿ ತಾಲೂಕಾಧ್ಯಕ್ಷ ಪ್ರಭುಗೌಡ ಪೋತರಡ್ಡಿ ಮತ್ತಿತರರು ಇದ್ದರು.