ಕಾರಜೋಳ ಸಕ್ಕರೆ ಕಾರ್ಖಾನೆ ಚರ-ಸ್ಥಿರಾಸ್ಥಿ ಹರಾಜಿಗೆ ಕ್ರಮ:ಡಿಸಿ
ವಿಜಯಪುರ,ಜು.12: ರೈತರಿಂದ ಕಬ್ಬನ್ನು ಪಡೆದುಕೊಂಡು ಕಬ್ಬಿನ ಬಿಲ್ ಪಾವತಿ ಮಾಡದೇ ಬಾಕಿ ಉಳಿಸಿಕೊಂಡ ಬಬಲೇಶ್ವರ ತಾಲೂಕಿನ ಕಾರಜೋಳ ಬಸವೇಶ್ವರ ಶುಗರ್ಶ್ ಸಕ್ಕರೆ ಕಾರ್ಖಾನೆಯ ಚರ-ಸ್ಥಿರಾಸ್ಥಿಗಳನ್ನು ಹರಾಜು ಹಾಕಿ ರೈತರ ಬಾಕಿ ಹಣ ಪಾವತಿ ಮಾಡಲು ಸಕ್ಕರೆ ಕಾರ್ಖಾನೆಯನ್ನು ಪರಿಶೀಲಿಸಿ ಮೌಲ್ಯಮಾಪನ ಮಾಡಲು ವಿಜಯಪುರ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ 10 ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಬಬಲೇಶ್ವರ ತಾಲೂಕಿನ ಕಾರಜೋಳ ಬಸವೇಶ್ವರ ಶುಗರ್ಸ್ ಸಕ್ಕರೆ ಕಾರ್ಖಾನೆಯವರು ಕಳೆದ ಸಾಲಿನ 2023-24ನೇ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ ರೈತರಿಂದ ಕಬ್ಬನ್ನು ಪಡೆದು, ನುರಿಸಿ ಇನ್ನೂ 48 ಕೋಟಿ ರೂ. ಹಣವನ್ನು ರೈತರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದರಿಂದ ಸಕ್ಕರೆ (ನಿಯಂತ್ರಣ) ಆದೇಶ 1966ರ ಮತ್ತು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಪ್ರಕಾರ ಜಿಲ್ಲಾಧಿಕಾರಿಗಳ ವರದಿ ಮೇರೆಗೆ ಬಾಕಿ ವಸೂಲಾತಿ ಮಾಡಲು ಬೆಂಗಳೂರು ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರು ಆದೇಶ ಹೊರಡಿಸಿದ್ದರು.
ಆದೇಶಾನುಸಾರ ಕಾರಜೋಳ ಶ್ರೀ ಬಸವೇಶ್ವರ ಶುಗರ್ಸ್ ಕಾರ್ಖಾನೆಗೆ ಸಂಬಂಧಿಸಿದ ಆಸ್ತಿಗಳ ಭೂ ದಾಖಲೆಗಳಲ್ಲಿ ರೈತರಿಗೆ ನೀಡಬೇಕಾಗಿರುವ ಬಾಕಿ ಹಣದ ಕುರಿತು ಬೋಜಾ ದಾಖಲಿಸಲು ಬಬಲೇಶ್ವರ ತಹಶೀಲ್ದಾರರಿಗೆ ಸೂಚಿಲಾಗಿತ್ತು. ಸೂಚನೆಯನುಸಾರ ತಹಶೀಲ್ದಾರರು ಸಕ್ಕರೆ ಕಾರ್ಖಾನೆಯ ದಾಖಲೆಗಳಲ್ಲಿ ಬೋಜಾ ನಮೂದಿಸಿದ್ದಾರೆ. ಅದ್ಯಾಗ್ಯೂ ಸಹ ಈ ಕಾರ್ಖಾನೆಯವರು ರೈತರಿಗೆ ಬಾಕಿ ಹಣವನ್ನು ಸಂದಾಯ ಮಾಡದೇ ಇರುವುದರಿಂದ ಮೌಲ್ಯಮಾಪನ ಸಮಿತಿ ರಚಿಸಲಾಗಿದ್ದು, ಈ ತಂಡ ನೀಡುವ ಮೌಲ್ಯಮಾಪನ ವರದಿಯನ್ವಯ ಹರಾಜು ಪ್ರಕ್ರಿಯೆಯನ್ನು ಕೈಗೊಂಡು ರೈತರ ಬಾಕಿ ಹಣವನ್ನು ಸಂದಾಯ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.