ಜನಸಂಖ್ಯಾ ನಿಯಂತ್ರಣ ಕ್ರಮಗಳ ಪಾಲನೆ ಅಗತ್ಯ
ಕಲಬುರಗಿ: ಜು.12:ಇಬ್ಬರು ಮಕ್ಕಳು, ಅವರಿಬ್ಬರ ನಡುವೆ ಅಂತರÀ, ಮದುವೆ ಮುಂದೂಡುವುದು, ವಿವಿಧ ವೈದ್ಯಕೀಯ ವಿಧಾನಗಳ ಅನುಸರಣೆ, ಜನಜಾಗೃತಿ, ಕಡ್ಡಾಯ ಶಿಕ್ಷಣ, ಆಪ್ತ ಸಮಾಲೋಚನೆ, ಮಹಿಳಾ ಸಬಲೀಕರಣದಂತಹ ಮುಂತಾದ ಜನಸಂಖ್ಯಾ ನಿಯಂತ್ರಣದ ಕ್ರಮಗಳ ಪಾಲನೆಯ ಅಗತ್ಯವಾಗಿದೆ ಎಂದು ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ಆಳಂದ ತಾಲೂಕಿನ ತೆಲ್ಲೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ವಿಶ್ವ ಜನಸಂಕ್ಯಾ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಯಾವುದೇ ರಾಷ್ಟ್ರದ ಅಭಿವೃದ್ಧಿಯನ್ನು ನಿರ್ಧರಿಸುವಲ್ಲಿ ಅಲ್ಲಿನ ಜನಸಂಖ್ಯೆಯ ಪ್ರಮಾಣವು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಜನಸಂಖ್ಯೆ ಮಿತಿಮೀರಿದಾಗ ರಾಷ್ಟದ ಅಭಿವೃದ್ಧಿಗೆ ತೊಡಕಾಗುತ್ತದೆ. ಅದನ್ನು ನಿಯಂತ್ರಿಸಿ, ಆದರ್ಶ ಜನಸಂಖ್ಯೆಯನ್ನಾಗಿಸುವುದು ಅವಶ್ಯಕವಾಗಿದೆ. ಎಲ್ಲಿ ಜೀವನ ಹಾಗೂ ಶಿಕ್ಷಣ ಮಟ್ಟಗಳು ಹೆಚ್ಚಾಗಿರುತ್ತವೆಯೋ, ಅಲ್ಲಿ ಜನಸಂಖ್ಯೆ ಕಡಿಮೆಯಿರುವುದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸಮಾಜ ಸೇವಕ ಹಾಗೂ ನ್ಯಾಯವಾದಿ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಜನಸಂಖ್ಯಾ ಸ್ಪೋಟದಿಂದಾಗಿ ಜಗತ್ತಿನಲ್ಲಿ ಲಭ್ಯವಿರುವ ಸೀಮಿತ ಸಂಪನ್ಮೂಲಗಳ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತಿದೆ. ಜನಸಂಖ್ಯೆಯ ಧನಾತ್ಮಕ ಮತ್ತು ಋಣಾತ್ಮಕ ಸಂಗತಿಗಳ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೇ ತಿಳಿಸಿಕೊಡಬೇಕು. ಜನಸಂಖ್ಯಾ ನಿಯಂತ್ರಣಕ್ಕೆ ಎಲ್ಲರು ಕೈಜೋಡಿಸಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಗ್ರಾಪಂ ಸದಸ್ಯ ಲಕ್ಷ್ಮೀಪುತ್ರ ಪಾಟೀಲ ಉದ್ಘಾಟಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ವೀರಣ್ಣ ಡಿ.ಚೌಲ್ ಮುಖ್ಯ ಅತಿಥಿಯಾಗಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಶಾಂತಾಬಾತಿ ಗಡೇದ್ ಅಧ್ಯಕ್ಷತೆ ವಹಿಸಿದ್ದರು. ಝಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಸಕ್ಸಸ್ ಕಂಪ್ಯೂಟರ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಜಗದೀಶ ಪುಟಗಿ, ಶಾಲೆಯ ಶಿಕ್ಷಕಿಯರಾದ ಸುಧಾರಾಣಿ ಡೆಂಕಿ, ಸವಿತಾ ಶೀಲವಂತ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.