ಸರ್ವತೋಮುಖ ಅಭಿವೃದ್ಧಿಗೆ ನಿಷ್ಠೆಯಿಂದ ಕೆಲಸ ಮಾಡಿ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಸೇಡಂ, ಜು,12: ತೋಟಗಾರಿಕೆ, ಕೃಷಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಶಿಕ್ಷಣ ಇಲಾಖೆ ಇನ್ನಿತರ ಇಲಾಖೆಯ ಅಧಿಕಾರಿಗಳು ಸಮಯ ಪಾಲನೆ, ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಮಹತ್ವ ನೀಡಿ ಜನರ ಪ್ರೀತಿ ಪಾತ್ರಕ್ಕೆ ಸಾಕ್ಷಿಯಾಗಿ ಇಲ್ಲದಿದ್ದರೆ ತಾಲೂಕಿನಿಂದ ಬೇರೆಡೆಗೆ ಹೋಗಲು ಇಂದಿನಿಂದಲೇ ಸಿದ್ದರಾಗಿ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅಧಿಕಾರಿ ವರ್ಗದವರಿಗೆ ಖಡಕ್ ಎಚ್ಚರಿಕೆ ನೀಡಿದರು. ತಾಲೂಕಾ ಪಂಚಾಯತ ಸಭಾಂಗಣದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕು ಮಟ್ಟದ ಪ್ರಗತಿಯ ವಾರ್ಷಿಕ ವರದಿ ಹಾಗೂ ಮಾಹಿತಿ ಪಡೆದುಕೊಂಡು ಅಭಿವೃದ್ಧಿಯ ವಿಚಾರದಲ್ಲಿ ಗಮನ ಹರಿಸಲೇಬೇಕೆಂದು ತಿಳಿಸಿದ ಅವರು ತೋಟಗಾರಿಕೆ ಇಲಾಖೆ ಅಡಿಯಲ್ಲಿ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಸರಿಯಾದ ಪ್ರಕಟಣೆ ರೂಪಿಸಬೇಕೆಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು, ಕೃಷಿ ಇಲಾಖೆಯಲ್ಲಿನ ಬೆಳೆ ವಿಮೆ ಹಂಚಿಕೆಯಲ್ಲಿ ಪಾರದರ್ಶಕತೆ ಹಾಗೂ ಸ್ಪಷ್ಟತೆ ಇಲ್ಲದಿದ್ದರೆ ಮುಲಾಜಿಲ್ಲದೆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು, ಜಲ್ ಜೀವನ ಮಿಷನ್, ಜೆಸ್ಕಾಂ, ಪುರಸಭೆ, ನಗರಾಭಿವೃದ್ಧಿ, ಕಂದಾಯ, ಪಂಚಾಯತ್ ರಾಜ್ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಿ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಬೇಕೆಂದು ಹೇಳಿದರು. ಈ ವೇಳೆಯಲ್ಲಿ ಸಹಾಯಕ ಉಪ ವಿಭಾಗಾಧಿಕಾರಿ ಆಶಪ್ಪ ಪೂಜಾರಿ, ತಹಶೀಲ್ದಾರ್ ಶ್ರೀ ಯಾಂಕ್ ಧಮ್ ಶ್ರೀ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಪ್ಪ ರಾಯಣ್ಣನವರ, ಹಾಗೂ ತಾಲೂಕು ಮಟ್ಟದ ಅಧಿಕಾರಿವರ್ಗದವರು ಉಪಸ್ಥಿತರಿದ್ದರು.