ಎಸ್ಸಾರ್ ವೈದ್ಯಕೀಯ ಕಾಲೇಜಿಗೆ ಎನ್‍ಎಂಸಿ ಮಾನ್ಯತೆ
ಬಾಗಲಕೋಟೆ: ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಸ್ಥಾಪನೆಗೊಂಡಿರುವ ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ವೈದ್ಯಕೀಯ ಪರಿಷತ್ತು ಮಾನ್ಯತೆ ನೀಡಿದ್ದು, ಇದಕ್ಕೆ ಹರ್ಷ ವ್ಯಕ್ತಪಡಿಸಿರುವ ಮಾಜಿ ಸಚಿವ ಎಸ್.ಆರ್. ಪಾಟೀಲ ಅವರು ಕೇಂದ್ರ ಸರ್ಕಾರ, ಎನ್‍ಎಂಸಿ ಮತ್ತು ರಾಜೀವ ಗಾಂಧಿ ಆರೋಗ್ಯ ವಿವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮೂರು ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯಕೀಯ ಪರಿಷತ್ತು ಮಾನ್ಯತೆ ನೀಡಿದ್ದು, ಅದರಲ್ಲಿ ತಮ್ಮ ಸಂಸ್ಥೆಗೂ ಸ್ಥಾನ ದೊರಕಿರುವುದು ಖುಷಿ ನೀಡಿದೆ ಎಂದು ಹೇಳಿದರು.
2009 ರಿಂದ ಎಸ್.ಆರ್. ಪಾಟೀಲ ಪ್ರತಿಷ್ಠಾನ ಕೆಲಸ ಮಾಡುತ್ತ ಬಂದಿದೆ. ಹುಟ್ಟೂರಾದ ಬಾಡಗಂಡಿಯಲ್ಲಿ ಮೆಡಿಕಲ್ ಕಾಲೇಜು ಮಾಡುವ ತೀರ್ಮಾನ ಪ್ರಕಟಿಸಿದಾಗ ಹಿತೈಷಿಗಳು ಹಳ್ಳಿಯಲ್ಲಿ ಸಂಸ್ಥೆ ಮಾಡುವ ಧೈರ್ಯ ಏಕೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಗಾಂಧೀಜಿ, ಕಲಾಂರ ಕನಸಿನಂತೆ ಹಳ್ಳಿಗಳತ್ತ ಮರಳುವ ಕೆಲಸವಾಗಬೇಕು. ಎಲ್ಲಕ್ಕೂ ಹೆಚ್ಚಾಗಿ ಸ್ವಗ್ರಾಮದಲ್ಲಿ ಸಂಸ್ಥೆ ಕಟ್ಟಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 10 ಸಾವಿರ ಜನರಿಗೆ ಉದ್ಯೋಗ ನೀಡುತ್ತಿರುವುದು ಖುಷಿ ತಂದಿದೆ ಎಂದರು. ಮೆಡಿಕಲ್ ಕಾಲೇಜಿನಿಂದಾಗಿ ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ ಎಂದರು.
ಶಿಕ್ಷಣ, ಉದ್ಯೋಗ, ಸಹಕಾರಿ ಕ್ಷೇತ್ರಗಳಲ್ಲಿ ಸಂಸ್ಥೆ ಕಟ್ಟಿರುವ ಹೆಮ್ಮೆಯಿದೆ. ಬಾಗಲಕೋಟೆ ಹಾಗೂ ವಿಜಯಪುರದ ಕೊನೆ ಹಳ್ಳಿಗಳ ಮಧ್ಯೆ ಬಾಡಗಂಡಿಯ ವೈದ್ಯಕೀಯ ಮಹಾವಿದ್ಯಾಲಯ ತಲೆ ಎತ್ತುತ್ತಿದೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದ್ದು, ಮುಂದೆ ಸಂಸ್ಥೆಯನ್ನು ಮತ್ತುಷ್ಟು ದೊಡ್ಡ ಮಟ್ಟದಲ್ಲಿ ಕಟ್ಟುವ ಗುರಿಯಿದೆ ಎಂದು ಹೇಳಿದರು.
ಆಸ್ಪತ್ರೆಯಿಂದ ಅನುಕೂಲ:
ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಿಂದಾಗಿ 350 ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. 630 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಯಲ್ಲಿ ಕಳೆದ 2023ರ ಆಗಸ್ಟ್ ತಿಂಗಳಿನಿಂದ ಶಸ್ತ್ರಚಿಕಿತ್ಸೆಯೂ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. 3.44 ಲಕ್ಷ ಹೊರರೋಗಿಗಳು, 2.06 ಒಳರೋಗಿಗಳ ವಿಭಾಗದಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 3015 ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಮಾಹಿತಿ ನಿಡಿದರು.
ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ನುರಿತ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಆಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ಅರ್ಪಿಸಲಾಗಿದೆ ಎಂದರು.
ಜಿಲ್ಲಾ ಕೇಂದ್ರ ಹಾಗೂ ರಾಜಧಾನಿಯಲ್ಲಿ ಆಸ್ಪತ್ರೆಗಳನ್ನು ಮಾಡುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿ ಮಾಡಿ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ನೀಡುವುದು ನನ್ನ ಗುರಿ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಂ.ಎನ್. ಪಾಟೀಲ ಮಾತನಾಡಿ, ಬಾಡಗಂಡಿಯಂಥ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ, ಶಿಕ್ಷಣ ಸಂಸ್ಥೆ, ಬ್ಯಾಂಕ್‍ಗಳನ್ನು ಸ್ಥಾಪಿಸುವ ಗುರಿಯನ್ನು ಎಸ್.ಆರ್. ಪಾಟೀಲರು ಹೊಂದಿದ್ದರು. ಅದರ ಭಾಗವಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆ ತಂದಿದೆ ಎಂದರು. ಎಸ್ಸಾರ್ ಅವರು ಹಿಡಿದ ಕೆಲಸ, ಕಂಡ ಕನಸು ಸಾಕಾರಗೊಳಿಸದೆ ಬಿಡುವವರಲ್ಲ. ಅಂಥ ನಾಯಕತ್ವದಲ್ಲಿ ಕೆಲಸ ಮಾಡುತ್ತಿರುವ ತೃಪ್ತಿ ನಮಗಿದೆ. ಬಾಡಗಂಡಿಯ ಮೆಡಿಕಲ್ ಕಾಲೇಜು ದೇಶವೇ ಹೆಮ್ಮೆ ಪಡುವ ರೀತಿಯಲ್ಲಿ ಕೆಲಸ ಮಾಡಲಿದೆ ಎಂದು ಹೇಳಿದರು.