ಜನಸಂಖ್ಯೆ ನಿಯಂತ್ರಣದಿಂದ ಅಭಿವೃದ್ಧಿ ಸಾಧ್ಯ
ಧಾರವಾಡ,ಜು12: ವಿಶ್ವ ಜನಸಂಖ್ಯಾ ದಿನವನ್ನು ವಿಶ್ವಸಂಸ್ಥೆಯು 1989 ರಲ್ಲಿ ಆರಂಭಿಸಿತು. ಭಾರತ ಸುಮಾರು 141 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಪ್ರಪಂಚದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಬಾಲ್ಯ ವಿವಾಹಗಳನ್ನು ನಿಯಂತ್ರಿಸಬೇಕು. ಇದರಿಂದ ಮಕ್ಕಳ ಜನನ ಮತ್ತು ಶಿಶು ಮರಣ ಪ್ರಮಾಣ ಕಡಿಮೆಯಾಗುತ್ತದೆ. ಜನಸಂಖ್ಯೆ ನಿಯಂತ್ರಣದಿಂದ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿ ಪಾಟೀಲ ಅವರು ಹೇಳಿದರು.
ಕವಿವಿಯ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಕೋಶ ಹಾಗೂ ಕವಿವಿಯ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ, ಮಾತನಾಡಿದರು.
ಜನಸಂಖ್ಯಾ ಹೆಚ್ಚಳದಿಂದ ಬಡತನ, ನಿರುದ್ಯೋಗ, ಶಿಕ್ಷಣ, ಆರೋಗ್ಯ, ಆರ್ಥಿಕ ಸ್ಥಿತಿಗತಿ ಮತ್ತು ಅನೇಕ ಸಮಸ್ಯೆಗಳು ಕಂಡು ಬರುತ್ತವೆ. ಅದೇ ರೀತಿಯಾಗಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಕಾಯಿಲೆ ಅತೀ ವೇಗವಾಗಿ ಹರಡುತ್ತಿದೆ. ಪ್ರತಿಯೊಬ್ಬರೂ ಮನೆಗಳ ಸುತ್ತ ಮುತ್ತಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ತಮ್ಮ ತಮ್ಮ ಆರೋಗ್ಯದ ಎಚ್ಚರ ವಹಿಸಬೇಕು, ಅದರಲ್ಲೂ ಗರ್ಭಿಣಿ ಮಹಿಳೆಯರು ಎಚ್ಚರದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕವಿವಿಯ ಎನ್‍ಎಸ್‍ಎಸ್ ಕೋಶದ ಕಾರ್ಯಕ್ರಮ ಸಂಯೋಜನಾಧಿಕಾರಿ ಪೆÇ್ರ. ಎಂ.ಬಿ.ದಳಪತಿ ಅವರು ಮಾತನಾಡಿ, ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಮೂಲಸೌಕರ್ಯ ಸಮಸ್ಯೆಗಳ ಜೊತೆಗೆ ವಲಸೆ ಪ್ರಮಾಣವು ಹೆಚ್ಚಳವಾಗುತ್ತಿದೆ. ಪ್ರತಿಯೊಬ್ಬರು ಜನಸಂಖ್ಯಾ ನಿಯಂತ್ರಣವನ್ನು ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ತಿಳಿಸಿದರು.
ನಿವೃತ್ತಿ ಕನ್ನಡ ಪ್ರಾಧ್ಯಾಪಕ ಪೆÇ್ರ. ಕೆ.ಎಸ್.ಕೌಜಲಗಿ ಅವರು ವಿಶೇಷ ಉಪನ್ಯಾಸವನ್ನು ನೀಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಚಿತ್ತರಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿತ್ತಿ ಪತ್ರವನ್ನು ಬಿಡುಗಡೆ ಮಾಡಿದರು. ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕವಿವಿಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಭಾ. ಎಸ್. ಗುಡ್ಡದಾನ್ವೇರಿ, ಕವಿವಿಯ ಶಿಕ್ಷಣ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಎನ್.ಎಸ್ ತಳವಾರ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಕವಿವಿ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.