ಡೆಂಗ್ಯೂ ನಿಯಂತ್ರಣಕ್ಕೆ ಆದ್ಯತೆ ನೀಡಿ
ಬಾಗಲಕೋಟೆ, ಜು12 : ಡೆಂಗ್ಯು ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಆದ್ಯತೆ ನೀಡಿ, ಜಿಲ್ಲೆಯಲ್ಲಿ ಒಂದೇ ಒಂದು ಸಾವು ಸಂಭವಿಸದಂತೆ ಎಲ್ಲ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಮ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ಸರ್ವೇಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲೂ ಡೆಂಗ್ಯು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಜಿಲ್ಲಾ ಆರೋಗ್ಯಾಧಿಕಾರಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಇಲಾಖೆಗಳಿಂದ ಅಗತ್ಯವಿರುವ ಅಧಿಕಾರಿ ಮತ್ತು ಸಿಬ್ಬಂದಿ ಸಹಕಾರ ಸಮನ್ವಯದೊಂದಿಗೆ ಡೆಂಗ್ಯು ನಿಯಂತ್ರಣ ತರಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಮಾತನಾಡಿ ರೋಗವಾಹಕಗಳು ಬರುವುದಕ್ಕಿಂತ ಮುಂಚೆ ಅವು ಬರದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಮುಖ್ಯವಾಗಿ ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಜನ ಜಾಗೃತಿಯಾಗಬೇಕು. ಅಂಗನವಾಡಿ ಮತ್ತು ಶಾಲಾ ಆವರಣದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕೊಳಚೆ ನೀರು ನಿಲ್ಲದಂತೆ ಒಟ್ಟಾರೆಯಾಗಿ ಶಾಲೆ ಅಂಗನವಾಡಿಗಳನ್ನು ಸ್ವಚ್ಚವಾಗಿಡಬೇಕು. ಮಕ್ಕಳ ಆರೋಗ್ಯದ ಮೇಲೆ ಬಹು ಬೇಗ ಪರಿಣಾಮ ಬೀರುವ ಸಂಭವವಿರುತ್ತದೆ. ಅಂಗನವಾಡಿ ಮತ್ತು ಶಾಲೆಗಳಲ್ಲಿ ಶೇ.100 ಲಸಿಕಾಕರಣ ಆಗಬೇಕು. ಸೆಪ್ಟೆಂಬರ ಮಾಹೆ ವರೆಗೂ ಡೆಂಗ್ಯೂ ಹರಡುವ ಸಾಧ್ಯತೆ ಇರುವದರಿಂದ ಎಲ್ಲಾ ಇಲಾಖೆ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇದ್ದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಜಯಶ್ರೀ ಎಮ್ಮಿ ಅವರು ಮಾತನಾಡಿ ಇಲ್ಲಿಯವರೆಗೂ ಒಂದೂ ಚಿಕುನ್ ಗುನ್ಯಾ ಪ್ರಕರಣ ಖಚಿತಪಟ್ಟಿರುವದಿಲ್ಲ. ಆದರೆ 260 ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಿದ್ದು, 259 ರಕ್ತ ಮಾದರಿಗಳನ್ನು ಪರೀಕ್ಷಿಸುವ ಮೂಲಕ ಎಲ್ಲಾ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.