ಕೂಡ್ಲಿಗಿ ತಾಲೂಕಿನಲ್ಲಿ 6 ಡೆಂಗೆ ಪ್ರಕರಣ, ತಡೆಗಟ್ಟಲು ಪ್ರತಿ ಹಳ್ಳಿಲೂ ಜಾಗೃತಿ ಮೂಡಿಸಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.12 :-  ಕೂಡ್ಲಿಗಿ ತಾಲೂಕಿನಲ್ಲಿ ಆರೋಗ್ಯ ಇಲಾಖೆ ಮಾಹಿತಿಯಂತೆ ಆರು ಡೆಂಗೆ ಪ್ರಕರಣ ಕಾಣಿಸಿಕೊಂಡಿದ್ದು ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಡೆಂಗೆ ಪ್ರಕರಣ ಹರಡದಂತೆ ತಡೆಗಟ್ಟಲು ಗ್ರಾಮಗಳಲ್ಲಿ  ಸ್ವಚ್ಛತೆಗೆ ಆದ್ಯತೆ ನೀಡಿ ಡೆಂಗೆ ಕುರಿತು ಜಾಗೃತಿ ಮೂಡಿಸುವ ಮೂಲಕ ಆರೋಗ್ಯವಂತ ಗ್ರಾಮಗಳಾಗಿ ಮಾಡಲು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗುವಂತೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಸೂಚಿಸಿದರು.
ಅವರು ಪಟ್ಟಣದಲ್ಲಿ ಗುರುವಾರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜರುಗಿದ ತಾಲೂಕಿನ ನಾನಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ತಾಲೂಕಿನಲ್ಲಿ 5 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಪ್ಪಿಗೆ ಸಿಕ್ಕಿದೆ. ಕಟ್ಟಡ ಕಟ್ಟಲು ಜಾಗದ ಸಮಸ್ಯೆ ಇದೆಯೇ? ಡೆಂಗೆ ನಿಯಂತ್ರಣಕ್ಕೆ ಏನು ಕ್ರಮಕೈಗೊಂಡಿದ್ದೀರಿ? 3ಕೋಟಿ ರೂ.ಗೂ ಅಧಿಕ ವಿಶೇಷ ಅನುದಾನದಲ್ಲಿ ಕೆಲವೆಡೆ ಆಸ್ಪತ್ರೆಗಳ ರಿಪೇರಿ ಕಾಮಗಾರಿ ಇದ್ದು, ಅರೆಬರೆಯಾದರೆ ಸುಮ್ಮನಿರಲ್ಲ ಎಂದು ಟಿಎಚ್‌ಒ ಡಾ.ಪ್ರದೀಪ್ ಕುಮಾರ್ ಅವರಿಗೆ ಶಾಸಕರು ಕೇಳಿದ ಪ್ರಶ್ನೆಗೆ ಡಾ ಪ್ರದೀಪಕುಮಾರ ಉತ್ತರ ನೀಡಿ   ಎರಡು ಕಡೆ ಆಸ್ಪತ್ರೆ ಕಟ್ಟಡಕ್ಕೆ ಜಾಗದ ಸಮಸ್ಯೆಯಿದೆ. ತಾಲೂಕಿನಲ್ಲಿ 6 ಡೆಂಗೆ ಪ್ರಕರಣಗಳಿವೆ. ಕಕ್ಕುಪ್ಪಿ ಮತ್ತು ಬಡೇಲಡುಕು ಗ್ರಾಮಗಳಲ್ಲಿ ಗ್ರಾಪo ನಿಂದ ಫಾಗಿಂಗ್ ಮಾಡಿಲ್ಲ ಎಂದು ತಿಳಿಸಿದರು. ಆಗ, ಶಾಸಕರು ಮಾತನಾಡಿ, ಎಲ್ಲಾ ಗ್ರಾಮಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಶಾಸಕರು ತಿಳಿಸಿದರು. 
ಹಳ್ಳಿಗಳಲ್ಲಿ ಜನರಿಗೆ  ಕುಡಿಯೋಕೆ  ನೀರು ಕೊಡೋಕು ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದೂ  ಕಾತ್ರಿಕೆಹಟ್ಟಿಯಲ್ಲಿ ಕೆಟ್ಟಿರುವ ಘಟಕ ಸರಿಪಡಿಸುವಂತೆ ನಾನೇ ಹೇಳಿ 3 ವಾರ ಕಳೆದರೂ ಇನ್ನೂ ರಿಪೇರಿ ಆಗಿಲ್ಲ ಅಂದ್ರೆ ಇನ್ನೂ ಜನರ ಮಾತು ಎಷ್ಟರ ಮಟ್ಟಿಗೆ ಕೇಳ್ತಿರಾ  ಏನ್ ಕೆಲ್ಸ ಮಾಡ್ತೀರಿ? ನೀವೆಲ್ಲಾ  ತಾಲೂಕಿನಲ್ಲಿ ನೀರಿಲ್ಲದೆ ಶೇ.90ರಷ್ಟು ಶೌಚಾಲಯಗಳು ನಿರುಪಯುಕ್ತವಾಗಿವೆ ನೈರ್ಮಲ್ಯದ ಕೊರತೆ ಸಹ ಕಾಣುತ್ತಿದೆ ಹೀಗೆ ಆದ್ರೆ ಹೆಂಗೇ ಎಂದು  ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಎಇಇ ಪ್ರಸನ್ನ ಅವರನ್ನು ಶಾಸಕರು  ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು  ತಾಲೂಕಿನಲ್ಲಿ 129 ಆರ್.ಒ ಪ್ಲಾಂಟ್ ಗಳಿದ್ದು, ಆ ಪೈಕಿ 28 ಘಟಕಗಳ ರಿಪೇರಿ ಇದೆ ಎಂದು ಹೇಳಿದರು. ಆಗ ಶಾಸಕರು, ಕಾತ್ರಿಕೆಹಟ್ಟಿ ಆರ್.ಒ ಪ್ಲಾಂಟ್ ನಾಳೆ ರಿಪೇರಿ ಮಾಡಿ ಫೋಟೋ ನನಗೆ ಕಳಿಸಬೇಕು.  ಉಳಿದ ಎಲ್ಲಾ ಆರ್.ಒ ಘಟಕಗಳು ಜು.28ರೊಳಗೆ ರಿಪೇರಿಯಾಗಬೇಕು ಎಂದು ಅಧಿಕಾರಿ ಪ್ರಸನ್ನ ಅವರಿಗೆ ಸೂಚಿಸಿದರು.
ಕೃಷಿ: ತಾಲೂಕಿನಲ್ಲಿ ಪ್ರಮುಖ ಬೆಳೆಯಾದ  ಶೇಂಗಾ ಬಿತ್ತನೆಗೆ ಮಳೆ ಕೊರತೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸುನಿಲ್ ಕುಮಾರ್ ತಿಳಿಸಿದರು. ನಕಲಿ ಬಿತ್ತನೆ ಬೀಜ, ಗೊಬ್ಬರದ ಬಗ್ಗೆ ದೂರುಗಳು ಬಂದರೆ ಕ್ರಮಕೈಗೊಳ್ಳಿ. ಜತೆಗೆ ಬೆಳೆ ವಿಮೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಶಾಸಕರು ಸೂಚಿಸಿದರು. ಇದಲ್ಲದೆ, ಪಶು ಸಂಗೋಪನೆ, ಬಿಸಿಎಂ, ಸಮಾಜ ಕಲ್ಯಾಣ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅರಣ್ಯ, ಪೊಲೀಸ್ ಇಲಾಖೆ ಸೇರಿ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ತಾಪಂ ಆಡಳಿತಾಧಿಕಾರಿ ಹಾಗೂ ಬಳ್ಳಾರಿ ಡಿಸಿಎಫ್ ಜಾವಗಲ್ ಜಿ.ರವಿ, ತಾಪಂ ಇಒ ವೈ.ರವಿಕುಮಾರ್ ಸೇರಿ ಇತರರಿದ್ದರು.
One attachment • Scanned by Gmail