ಸೊಳ್ಳೆಗಳ ನಿಯಂತ್ರಣಕ್ಕೆ ಮ.ಮ.ಹಳ್ಳಿ ಪ.ಪಂ.ನಿಂದ ಫಾಗಿಂಗ್
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಜು. 12: ರಾಜ್ಯದಾದ್ಯಂತ ಮಾರಕ ರೋಗವಾಗಿ ಪರಿಣಮಿಸುತ್ತಿರುವ ಡೆಂಗ್ಯೂ ರೋಗವನ್ನು ಪಟ್ಟಣದಲ್ಲಿ ಹರಡದಂತೆ ಹತೋಟಿಗೆ ತರಲು ಪ.ಪಂ. ಆಡಳಿತ ಸಜ್ಜಾಗಿದ್ದು, ಪಟ್ಟಣದ  ವಾರ್ಡುಗಳಲ್ಲಿ ಫಾಗಿಂಗ್ ಮತ್ತು ಡಿ.ಡಿ.ಟಿ ಸಿಂಪರಣೆ ಕಾರ್ಯವನ್ನು ಭರದಿಂದ ಮಾಡುತ್ತಿದೆ.
ಮಾರಕ ಡೆಂಗ್ಯೂ ರೋಗದ ಮೂಲ ಸೊಳ್ಳೆಗಳಾಗಿದ್ದು, ಅವುಗಳ ನಿಯಂತ್ರಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು‌ ಕೈಗೊಳ್ಳುವ ನಿಟ್ಟಿನಲ್ಲಿ ಪಟ್ಟಣದ ಹಲವು ವಾರ್ಡುಗಳಲ್ಲಿ ಆಟೋಗಳ ಮೂಲಕ ಫಾಗಿಂಗ್ ಮಾಡಲಾಗುತ್ತಿದೆ. ಅಲ್ಲದೇ ಡಿ.ಡಿ.ಟಿ. ದ್ರಾವಣವನ್ನು ಸೂಕ್ತ ಸ್ಥಳಗಳಲ್ಲಿ ಸಿಂಪರಣೆಯನ್ನು ಮಾಡಲಾಗುತ್ತಿದೆ.
ಈ ಕುರಿತು ಪತ್ರಿಕೆಗೆ ಪ.ಪಂ. ಮುಖ್ಯಾಧಿಕಾರಿ ಖಾಜಾಮೈನುದ್ದೀನ್ ಪ್ರತಿಕ್ರಿಯಿಸಿ, ಚರಂಡಿಗಳು, ತೆರೆದ ಸಣ್ಣಪುಟ್ಟ ಗುಂಡಿಗಳು, ಸೊಳ್ಳೆಗಳು ಉತ್ಪತ್ತಿಯಾಗುವ ಮೂಲೆಗಳಲ್ಲಿ, ನೀರು‌ ನಿಲ್ಲುವ ಸ್ಥಳಗಳಲ್ಲಿ ಡಿ.ಡಿ.ಟಿ ಸಿಂಪರಣೆ ಮಾಡಲಾಗುತ್ತಿದೆ. ಜೊತೆಗೆ ಮನೆಗಳ ಮೂಲೆಕಟ್ಟುಗಳಲ್ಲಿ ಮನೆಯವರು ಆಗ್ರಹಿಸಿದರೆ ಅಲ್ಲಿಯೂ ನಮ್ಮ ಸಿಬ್ಬಂದಿ ಸಿಂಪರಣೆ ಮಾಡಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ಕ್ರಮವಹಿಸಿದ್ದಾರೆ. ಅಷ್ಟೇ ಅಲ್ಲದೇ ರೋಗದ ಕಾರಣಗಳು ಹಾಗೂ ನಿಯಂತ್ರಣಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ನಮ್ಮ ಸಿಬ್ಬಂದಿ ಮಾಡುತ್ತಿದ್ದಾರೆ ಎಂದರು. ಇದೂವರೆಗೂ ನಮ್ಮ ವ್ಯಾಪ್ತಿಯಲ್ಲಿ ಯಾವುದೇ ಡೆಂಗ್ಯೂ ಪ್ರಕರಣ ದಾಖಲಾಗಿಲ್ಲ ಎನ್ನುವ ಮಾಹಿತಿ ನೀಡಿದರು.
ಪಟ್ಟಣದಾದ್ಯಂತ ಸೊಳ್ಳೆಗಳ ನಿಯಂತ್ರಣಕ್ಕೆ ಪ.ಪಂ.ನಿಂದ ಫಾಗಿಂಗ್  ಹಾಗೂ ಡಿ.ಡಿ.ಟಿ ಸಿಂಪರಣೆಯಂತಹ  ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಜೊತೆಗೆ ಎಲ್ಲಂದರಲ್ಲಿ ಕಸ ಹಾಕುವ ಹಾಗೂ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ  ಪಟ್ಟಣವಾಸಿಗಳು ಆಡಳಿತ ವ್ಯವಸ್ಥೆಗೆ ಸಹಕರಿಸಿ ಎಂದು ಮನವಿ ಮಾಡಿದರು.
ಖಾಜಾ ಮೈನುದ್ದೀನ್,
ಪ.ಪಂ. ಮುಖ್ಯಾಧಿಕಾರಿ.