ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಆಗ್ರಹಿಸಿ ಸಚಿವ ರಾಮಲಿಂಗಾರೆಡ್ಡಿಯವರಿಗೆ ರೆಡ್ಡಿ ಸಮಾಜ ಮನವಿ.
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಜು.12: ಹಗರಿಬೊಮ್ಮನಹಳ್ಳಿ ತಾಲೂಕಿನ ರೆಡ್ಡಿ ಸಮಾಜದ ಜಮೀನಿನಲ್ಲಿ ಸಮಾಜದ ಕಲ್ಯಾಣ ಮಂಟಪ, ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನರ ದೇವಸ್ಥಾನ ನಿರ್ಮಾಣ ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿ 10 ಕೋಟಿ ಅನುದಾನ ಮಂಜೂರು ಮಾಡುವಂತೆ‌ ಕೋರಿ ಹ.ಬೊ.ಹಳ್ಳಿ ತಾಲೂಕಿನ ರೆಡ್ಡಿ ಸಮಾಜದ ಪದಾಧಿಕಾರಿಗಳು ಸಚಿವ ರಾಮಲಿಂಗಾರೆಡ್ಡಿಯವರನ್ನು ಮನವಿ ಮಾಡಿದರು.
ಅವರು ಮರಿಯಮ್ಮನಹಳ್ಳಿಗೆ ಸಮೀಪ ತಿಮ್ಮಲಾಪುರ ಬಳಿಯ ಟೋಲ್ ಪ್ಲಾಜಾದ ಬಳಿ ರೆಡ್ಡಿ ಸಮಾಜದ ಪದಾಧಿಕಾರಿಗಳು ಹಾಗೂ ಮುಖಂಡರುಗಳು ಸಚಿವ ರಾಮಲಿಂಗಾರೆಡ್ಡಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನ, ಮಹಾನ್ ದಾರ್ಶನಿಕ, ಸ್ವಾತಂತ್ರ್ಯ ಹೋರಾಟಗಾರ ಉಯ್ಯಲುವಾಡ ನರಸಿಂಹರೆಡ್ಡಿ ಇವರುಗಳು ಎಲ್ಲಾ ಸಮಾಜಗಳ ಆಸ್ತಿಯಾಗಿದ್ದಾರೆ. ಇಂತಹ ದಾರ್ಶನಿಕರು ರಾಷ್ಟ್ರಕೂಟರ ಪರಂಪರೆಯ ಮೂಲ ಹೊಂದಿರುವ ರೆಡ್ಡಿ ಸಮಾಜ ತನ್ನದೇ ಆದ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಅಲ್ಲದೇ ಸಮಾಜದ ದಾರ್ಶನಿಕರ ಕುರಿತು ಭಕ್ತಿ ಮತ್ತು ಗೌರವವನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಸದರಿ ವಿಚಾರಕ್ಕಾಗಿ ಹಗರಿಬೊಮ್ಮನಹಳ್ಳಿ ತಾಲೂಕಿನ ಸಮಾಜದ ಜಮೀನಿನಲ್ಲಿ ಸಮುದಾಯ ಭವನ, ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನರ ದೇವಸ್ಥಾನವನ್ನು ನಿರ್ಮಾಣ ಮಾಡುವುದರ ಜೊತೆ  ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲೆ ಪ್ರಾರಂಭಿಸಲು ರೆಡ್ಡಿ ಸಮಾಜ ತೀರ್ಮಾನಿಸಿದೆ. ಇವುಗಳನ್ನು ಸಾಕಾರಗೊಳಿಸಿಲು ಸರ್ಕಾರದ ಯಾವುದಾದರೂ ವಿಶೇಷ ಅನುದಾನದಡಿಯಲ್ಲಿ ಹಣ ಮಂಜೂರು ಮಾಡಿಸಿಕೊಡುವಂತೆ  ತಮ್ಮ ಮನವಿಯಲ್ಲಿ ರೆಡ್ಡಿ ಸಮಾಜದವರು ಸಚಿವ ರಾಮಲಿಂಗಾರೆಡ್ಡಿಯವರನ್ನು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ರೆಡ್ಡಿ ಸಮಾಜದ ಅದ್ಯಕ್ಷ ಬಸವರೆಡ್ಡಿ, ಸಮಾಜದ ಮುಖಂಡರುಗಳಾದ ಬನ್ನಿಗೋಳ ವೆಂಕಣ್ಣ, ಮೈನಳ್ಳಿ ಕೊಟ್ರೇಶ್, ತೆಲುಗೋಳಿ ವೆಂಕರೆಡ್ಡಿ, ಮಂಜುರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ, ಮೂಲಿಮನಿ ರವಿಪ್ರಸಾದ್, ಡಂಬ್ರಳ್ಳಿ ಮಹೇಶ್, ಮುಕ್ಕಣ್ಣ, ಎನ್. ಮಂಜುನಾಥ ರೆಡ್ಡಿ, ಸಿದ್ದರೆಡ್ಡಿ, ಅಡಿವೆಣ್ಣ, ಹೇಮರೆಡ್ಡಿ, ಲಿಂಗರೆಡ್ಡಿ, ಯಲ್ಲಪ್ಪ, ಅರುಣ, ಬಸವರೆಡ್ಡಿ ಸೀಗೇನಹಳ್ಳಿ, ದೊಡ್ಡಬಸಪ್ಪ ರೆಡ್ಡಿ ಹಾಗೂ ಇತರರು ಇದ್ದರು.