ಸ್ವ ಉದ್ಯೋಗ ಸ್ವಾವಲಂಬಿ ಜೀವನಕ್ಕೆ ಸಹಕಾರಿ – ಶಾಸಕ
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.12 :-  ಮಹಿಳೆಯರು ಸ್ವ ಉದ್ಯೋಗ ಕಲಿಯುವುದರಿಂದ ತಮ್ಮ  ಸ್ವಾವಲಂಬಿ ಜೀವನ ನಡೆಸಲು ಸರ್ಕಾರದಿಂದ  ಅವರಿಗೆ ಬೇಕಾದ ಕುಶಲಕರ್ಮಿ ಸಾಮಗ್ರಿಗಳನ್ನು ಉಚಿತವಾಗಿ   ವಿತರಣೆ ಮಾಡಿದಲ್ಲಿ ಆರ್ಥಿಕವಾಗಿ ಸಬಲರಾಗುವ ಮೂಲಕ ತಮ್ಮ ಕುಟುಂಬದ ಹೆಚ್ಚಿನ  ಜವಾಬ್ದಾರಿಯನ್ನು ನಿಭಾಯಿಸಬಲ್ಲರು ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಎನ್ ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಗುರುವಾರ ಪಟ್ಟಣ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 63 ಮಹಿಳಾ ಫಲಾನುಭವಿಗಳಿಗೆ ಜಿಪಂ ಗ್ರಾಮೀಣ ಕೈಗಾರಿಕಾ ಇಲಾಖೆಯಿಂದ ನೀಡುವ ಹೊಲಿಗೆಯಂತ್ರಗಳನ್ನು ವಿತರಿಸಿ ಮಾತನಾಡುತ್ತಾ  ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಸರಕಾರದಿಂದ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸುವುದರಿಂದ ಹೆಚ್ಚಿನ ಅನುಕೂಲದ ಜತೆಗೆ ಯಂತ್ರ ಖರೀದಿಗೆ ಆರ್ಥಿಕ ಹೊರೆಯಾಗುವುದು ತಪ್ಪಲಿದೆ. ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳಿಗೆ ಎಲ್ಲಾ ಗ್ರಾಪಂಗೆ ಆದ್ಯತೆ ನೀಡಿ ಫಲಾನುಭವಿಗಳನ್ನು ಈ ಬಾರಿ ಆಯ್ಕೆ ಮಾಡಲಾಗಿ ಮುಂದಿನ ದಿನಗಳಲ್ಲೂ ಇನ್ನಷ್ಟು ಸರಕಾರ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಗಮನಹರಿಸಲಾಗುವುದು ಎಂದು ತಿಳಿಸಿದರಲ್ಲದೆ, ವೃತ್ತಿಪರ ಕುಂಬಾರರು, ಬಡಗಿ, ಕಂಬಾರರು ಅವರ ಕುಲ ಕಸುಬಿಗೆ ತಕ್ಕಂತೆ   ಸೇರಿ ಎಲ್ಲರಿಗೂ ಸರಕಾರ ಹೆಚ್ಚಿನ ಅನುಕೂಲ ಮಾಡಿಕೊಡುವ ಮೂಲಕ ಅವರ ಜೀವನಕ್ಕೆ ಆಸರೆಯಾಗುವಂತೆ ಅನುದಾನ ಬಿಡುಗಡೆ ಮಾಡಬೇಕೆಂದು ಗಮನಹರಿಸಲಾಗುವುದು  ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಆಡಳಿತಾಧಿಕಾರಿ ಜೆ.ಜಿ.ರವಿ, ತಾಪಂ ಇಒ ವೈ.ರವಿಕುಮಾರ್, ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ಎನ್.ಕೆ.ಚೈತ್ರಾ ಸೇರಿ ಇತರರಿದ್ದರು.
One attachment • Scanned by Gmail