ಹೊಸಪೇಟೆಯಲ್ಲಿ ಪ್ರತ್ಯಕ್ಷವಾದ  ಕಾಡುಪ್ರಾಣಿ “ಕರಡಿ”ಸೆರೆಹಿಡಿಯಲು ಅರಣ್ಯ ಇಲಾಖೆಯ ಕಾರ್ಯಾಚರಣೆ.
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ (ವಿಜಯನಗರ)ಜು,12: ನಗರದ ಹೃದಯ ಭಾಗದಲ್ಲಿರುವ ಶ್ರೀರಾಮುಲು ಉದ್ಯಾನದಲ್ಲಿ ಶುಕ್ರವಾರ ಬೆಳ್ಳಂ ಬೆಳಿಗ್ಗೆಯೇ ಎರಡು ಕರಡಿಗಳು ಓಡಾಡಿಕೊಂಡಿದ್ದು, ಜನರು ಆತಂಕ ಸೃಷ್ಟಿಮಾಡಿದವು.
ರಾಣಿಪೇಟೆಯ ಮನೆಯೊಂದರ ಅಂಗಳದಲ್ಲಿ ಒಂದು ತಾಯಿ ಮತ್ತು ಮರಿ ಕರಡಿಗಳು ಆಡುತ್ತಿರುವುದನ್ನು ಮಹಿಳೆಯೊಬ್ಬರು ನಸುಕಿನ 4.30ರ ವೇಳೆಗೆ ಕಂಡಿದ್ದರು. ಈ ಪೈಕಿ ಒಂದು ಕರಡಿ ಸಮೀಪದ ಶ್ರೀರಾಮುಲು ಉದ್ಯಾನದಲ್ಲಿ ತಿರುಗಾಡಿದೆ. ಕೆಲವರು ಅದರ ವಿಡಿಯೊ ಚಿತ್ರೀಕರಣ ಸಹ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಜನ ಗುಂಪುಗೂಡುತ್ತಿದ್ದಂತೆಯೇ ಆತಂಕಗೊಂಡ ಕರಡಿ ಉದ್ಯಾನ ಹಿಂದಿರುವ, ತೋಟಗಾರಿಕೆ ಇಲಾಖೆಯ ಸ್ಥಳದಲ್ಲಿನ ಪೊದೆಯಲ್ಲಿ ಅಡಗಿ ಕುಳಿತಿದೆ. ಇನ್ನೊಂದು ಮರಿ ಸಹ ಅಲ್ಲೇ ಇದೆಯೋ, ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ 5.30ರ ಸುಮಾರಿಗೆ ಸ್ಥಳಕ್ಕೆ ಧಾವಿಸಿದ್ದರು. ಆದರೆ ಕರಡಿ ಸೆರೆಹಿಡಿಯುವ ಪರಿಕರಗಳಿಲ್ಲದ ಕಾರಣ ಅವುಗಳನ್ನು ಕಮಲಾಪುರದಿಂದ  ತರಿಸಿಕೊಳ್ಳುವ ಹೊತ್ತಿಗೆ ಬೆಳಿಗ್ಗೆ 7.30 ಕಳೆದಿತ್ತು, ಬಲೆ, ಬೋನು, ಅರಿವಳಿಕೆ ಇಂಜೆಕ್ಷನ್ ನೀಡುವ ಗನ್‌ ಸಹಿತ ಬಂದಿರುವ ಸಿಬ್ಬಂದಿ ಕರಡಿ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು.
ಎರಡು ವರ್ಷದ ಹಿಂದೆಯೂ ಘಟನೆ:
ಎರಡು ವರ್ಷದ ಹಿಂದೆ ರಾಣಿಪೇಟೆ ಪ್ರದೇಶಕ್ಕೆ ಕರಡಿಯೊಂದು ಬಂದಿತ್ತು. ಮನೆಯ ತಾರಸಿ ಮೇಲೆ ಬಂದಿದ್ದ ಅದನ್ನು ಅರಿವಳಿಕೆ ಇಂಜೆಕ್ಷನ್ ನೀಡಿ ಬಳಿಕ ಸೆರೆ ಹಿಡಿಯಲಾಗಿತ್ತು.
ಸೆರೆ ಸಿಕ್ಕ ಕರಡಿ: ಮರಿಗಾಗಿ ಹುಡುಕಾಟ:
ಇಲ್ಲಿನ ಶ್ರೀರಾಮುಲು ಉದ್ಯಾನ ಬಳಿ ಪೊದೆಯಲ್ಲಿ ಅಡಗಿ ಕುಳಿತಿದ್ದ ಕರಡಿಯೊಂದನ್ನು ಶುಕ್ರವಾರ ಬೆಳಿಗ್ಗೆ 8.45ರ ಸುಮಾರಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಯಿತು.
ಅದರ ಮರಿ ಇನ್ನೂ ಸಿಕ್ಕಿಲ್ಲ, ಅದಕ್ಕಾಗಿ ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ಮುಂದುವರೆಸಿದ್ದರೂ ಸರಿಯಾಗಿ ಇರುವ ಬಗ್ಗೆ ಯಾವುದೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲಾ
ಶುಕ್ರವಾರ ನಸುಕಿನಲ್ಲಿ ಎರಡು ಕರಡಿಗಳು ನಗರದ ಹೃದಯ ಭಾಗದ ಈ ಉದ್ಯಾನ ಸಮೀಪ ಬಂದಿದ್ದುದನ್ನು ಜನ ನೋಡಿದ್ದರು, ಈ ಪೈಕಿ ತಾಯಿ ಕರಡಿ ಉದ್ಯಾನದಲ್ಲಿ ಓಡಾಡಿ ಬಳಿಕ ಸಮೀಪದ  ತೋಟಗಾರಿಕೆ ಇಲಾಖೆಯ ಜಾಗದಲ್ಲಿ ಪೊದೆಯಲ್ಲಿ ಅವಿತು ಕುಳಿತಿತ್ತು. ಸೆರೆ ಹಿಡಿಯಲಾಗಿದ್ದು ಮರಿಗಾಗಿ ಶೋಧ ಮುಂದುವರೆದಿದೆ.
One attachment • Scanned by Gmail