ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಸಿಐಟಿಯು ಆಗ್ರಹ
ಹೊಸಪೇಟೆ, ಜು.12: ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವುದು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿ, ಸಿಐಟಿಯು ಮುಖಂಡರು ನಗರದ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಖಾತರಿಪಡಿಸಬೇಕು. ಎಪಿಎಂಸಿ ವ್ಯವಸ್ಥೆಯನ್ನು ಬಲಗೊಳಿಸಬೇಕು. ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಣವನ್ನು ದುಬಾರಿಗೊಳಿಸುವ ಹಾಗೂ ಅವೈಜ್ಞಾನಿಕ ಶಿಕ್ಞಣ ನೀತಿಯನ್ನು ಜಾರಿಗೊಳಿಸಬಾರದು. ಕಾರ್ಮಿಕರಿಗೆ ಕನಿಷ್ಟ ವೇತನ ನೀಡಬೇಕು. ಕೆಲಸದ ಅವಧಿಯನ್ನು ವಾರಕ್ಕೆ 36 ಗಂಟೆಗಳು ಹಾಗೂ ಪಾಳಿ ಅವಧಿಯನ್ನು 6 ಗಂಟೆಗಳಿಗೆ ಮಿತಿಗೊಳಿಸಬೇಕು. ಇದರ ಜತೆಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೊಳಿಸುತ್ತಿರುವ ವಸತಿ ಯೋಜನೆಗಳನ್ನು ಬಳಸಿಕೊಂಡು ರಾಜ್ಯದಲ್ಲಿರುವ ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ನಿರ್ದಿಷ್ಟ ಕಾಲಮಿತಿಯೊಳಗೆ ವಸತಿ ಯೋಜನೆಯನ್ನು ಜಾರಿಗೊಳಿಸಬೇಕು.ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಫಲಾನುಭವಿಗಳ ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಧನ ಸಹಾಯ ಕಡಿತ ಆದೇಶವನ್ನು ಹಿಂಪಡೆದು ಧನಸಹಾಯವನ್ನು ಈ ಹಿಂದಿನಂತೆ ಮುಂದುವರೆಸಬೇಕು. ಮನರೇಗಾ ಯೋಜನಯಡಿ ವಾರ್ಷಿಕ 200 ದಿನಗಳ ಕಾಲ ಕೆಲಸ ನೀಡಿ ಪ್ರತಿ ದಿನಕ್ಕೆ 700 ರೂ. ಕೂಲಿ ನೀಡಬೇಕು. ಈ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಸಮಿತಿಯ ಕೆ.ಎಂ. ಸ್ವಪ್ನ, ಎಲ್.ಯಲ್ಲಾಲಿಂಗ, ಗೋಪಾಲ್, ಆರ್.ಭಾಸ್ಕರ್ ರೆಡ್ಡಿ, ಎಲ್.ಮಂಜುನಾಥ, ಕೆ.ಎಂ.ಸಂತೋಷ್, ಕೆ.ನೌಶಾದ್ ಅಲಿ, ಕೆ.ನಾಗರತ್ನಮ್ಮ ಇದ್ದರು.
ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಪತ್ರವನ್ನು ರವಾನಿಸಿದರು.