ಮುಡಾ ಹಗರಣ ಸಿಎಂ, ನಗರಾಭಿವೃದ್ಧಿ ಸಚಿವರ ರಾಜಿನಾಮೆಗೆ ಬಿಜೆಪಿ ಒತ್ತಾಯ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.12: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಂದಾಜು 4 ಸಾವಿರ ಕೋಟಿ ರೂ. ಹಗರಣವನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಗಿಯುವ ವರೆಗೆ  ಸಿಎಂ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಆಗ್ರಹಿಸಿದ್ದಾರೆ.
ಅವರು ನಗರದ ಬಿಜೆಪಿಯ ಜಿಲ್ಲಾ ಕಚೇರಿಯಲ್ಲಿ ನಿನ್ನೆ  ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು, ಮುಡಾ ಹಗರಣಕ್ಕೆ ಸಂಬಂಸಿದಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಬರೆದಿದ್ದ 14 ಪತ್ರ ಹಾಗೂ ರಚಿಸಲಾಗಿದ್ದ ಕಮಿಟಿ ವರದಿವನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಸುಪ್ರೀಕೋರ್ಟ್ ಆದೇಶ ತಿರುಚಿ ಬಿಡಿ ನಿವೇಶನಗಳನ್ನ ಸಿಎಂ ಸಿದ್ಧರಾಮಯ್ಯ ಅವರು ಪತ್ನಿ ಹೆಸರಿನಲ್ಲಿ ಪಡೆಯುವ ಮೂಲಕ ಮುಡಾದಲ್ಲಿ ಅಕ್ರಮ ವೆಸಗಿದ್ದಾರೆ. ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಅದರ ಪ್ರಕಾರ ಸ್ವಾಧೀನ ಪಡಿಸಿಕೊಂಡಿರುವ ಜಮೀನಗಳಿಗೆ ಅಭಿವೃದ್ಧಿ ನಿವೇಶನ ಲೆಕ್ಕದಲ್ಲಿ 40:60 ಅನುಪಾತದಲ್ಲಿ ಖಾಲಿ ನಿವೇಶನ ಅದೇ ಬಡಾವಣೆ ಅಥವಾ ಅದರ ಮೌಲ್ಯಕ್ಕೆ ಸರಿಸಮಾನವಾರ ಬಡಾವಣೆಗಳಲ್ಲಿ ಮಾತ್ರ ನೀಡಬೇಕು ಎಂದಿದೆ. ನಂತರದಲ್ಲಿ 50:50 ಅನುಪಾತದಲ್ಲಿ ನೀಡಬೇಕು ಎಂದು ತೀರ್ಪು ನೀಡಿದೆ.  ಆದರೆ, ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಮ್ಮರಿಗೆ ಬಂದಿರುವ ಅರಿಶಿಣ ಕುಂಕುಮದ ರೂಪದ ಕೆಸರಗದ್ದೆಯ ಜಮೀನನ್ನು 1992ರಲ್ಲಿ ಸ್ವಾಧೀನವಾಗಿದೆ. 2006-7ರಲ್ಲಿಯೇ ಬಡಾವಣೆ ಅಭಿವೃದ್ಧಿ ಮಾಡಲಾಗಿದೆ. ಆದರೆ, ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘಿಸಿ ಮುಡಾ ಅಧಿಕಾರಿಗಳು 2017ರಲ್ಲಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಮುಡಾ ಅಧಿಕಾರಿಗಳ ಪ್ರಸ್ತಾವನೆ ಸೇರಿಸಿರುವುದು ಹಗರಣಕ್ಕೆ ಮೂಲ ಕಾರಣವಾಗಿದೆ. ಅದಕ್ಕಾಗಿ ಮುಡಾ ಹಗರಣವನ್ನು ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗುರುಲಿಂಗನಗೌಡ, ಗುತ್ತಿಗನೂರುವಿರೂಪಾಕ್ಷಗೌಡ, ಕಾರ್ಯದರ್ಶಿ ಕೆ.ಆರ್.ಮಲೇಶ್ ಕುಮಾರ್, ಶರಣ ಸೇರಿದಂತೆ ಇತರರು ಇದ್ದರು.
ಬಳ್ಳಾರಿಗೆ ವಿಜಯೇಂದ್ರ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು  ಜು.20 ರಂದು ಬಳ್ಳಾರಿಗೆ ಆಗಮಿಸಲಿದ್ದಾರೆ. ಅಂದು ವಿಶೇಷ ಕಾರ್ಯಕಾರಿಣಿ ಸೇರಿ ಪಕ್ಷದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾಧ್ಯಕ್ಷ ಅನೀಲ್ ನಾಯ್ಡು ತಿಳಿಸಿದರು.