ಜನಸಂಖ್ಯೆ ಏರಿಕೆ ತಡೆಗೆ, ಡೆಂಗ್ಯು ನಿಯಂತ್ರಣಕ್ಕೆ ಸಹಕರಿಸಿ
ಕೋಲಾರ,ಜು,೧೨- ಜನಸಂಖ್ಯೆ ಏರಿಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸಿ ಮತ್ತು ಜನತೆಯನ್ನು ಇದೀಗ ಕಾಡುತ್ತಿರುವ ಡೆಂಗ್ಯೂ ಮಾರಿಯ ಕುರಿತು ಮುಂಜಾಗ್ರತೆ ವಹಿಸಿ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಎಂದು ಅರಾಭಿಕೊತ್ತನೂರು ಸಮುದಾಯ ಆರೋಗ್ಯಾಧಿಕಾರಿ ಕೀರ್ತಿಕಾ ಮನವಿ ಮಾಡಿದರು.
ತಾಲ್ಲೂಕಿನ ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಡೆಂಗ್ಯೂ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನಸಂಖ್ಯೆ ಏರಿಕೆ ಆತಂಕಕಾರಿಯಾಗಿದ್ದು, ಕೆಲವೇ ವರ್ಷಗಳಲ್ಲಿ ನಾವೂ ಚೀನಾವನ್ನು ಹಿಂದಿಕ್ಕುವತ್ತ ಸಾಗುತ್ತಿದ್ದೇವೆ, ಇದರಿಂದ ದೇಶದ ಅಭಿವೃದ್ದಿಗೆ ಹಿನ್ನಡೆಯಾಗುತ್ತದೆ ಮತ್ತು ಅಪಾರ ಜನಸಂಖ್ಯೆಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಕಷ್ಟವಾಗಿ ಬಡತನ ಹೆಚ್ಚುತ್ತದೆ ಎಂದು ತಿಳಿಸಿದರು.
ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಇದರ ಪ್ರಯೋಜನ ಗ್ರಾಮೀನ ಜನತೆ ಪಡೆಯಬೇಕು, ಜನಸಂಖ್ಯೆ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಡೆಂಗ್ಯು ಕುರಿತು ಅರಿವು ಮೂಡಿಸಿದ ಅವರು, ಮಳೆಗಾಲ ಆರಂಭಗೊಂಡಿದೆ, ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಾಶಪಡಿಸದಿದ್ದರೆ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ಡೆಂಗ್ಯುಗೆ ಕಾರಣವಾದ ಈಡೀಸ್ ಸೊಳ್ಳೆ ನಿಯಂತ್ರಣಕ್ಕಾಗಿ ಮನೆಯ ಸುತ್ತಮುತ್ತ ಟೈರುಗಳಲ್ಲಿ, ಬಾಡೆಲ್, ತೆಂಗಿನ ಚಿಪ್ಪು, ಟೈರ್ ಮತ್ತಿತರವುಗಳಲ್ಲಿ ನೀರು ನಿಂತಿದ್ದರೆ ಖಾಲಿ ಮಾಡಿ, ಇವೇ ಸೊಳ್ಳೆಗಳ ಸಂತಾನೋತ್ಪತ್ತಿಗೆ ಜಾಗಗಳು ಎಂದ ಅವರು, ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾಮದಲ್ಲಿನ ಕುಂಟೆ, ಹಳ್ಳ, ಕಲ್ಯಾಣಿ ಮತ್ತಿತರ ನೀರಿನ ತಾಣಗಳಲ್ಲಿ ಈಡೀ ಸೊಳ್ಳೆ ಉತ್ಪತ್ತಿ ತಡೆಯಲು ಗಪ್ಪಿ ಮತ್ತು ಗಾಂಬೂಸಿಯಾ ಮೀನುಗಳನ್ನು ಬಿಟ್ಟರೆ ಅವು ಸೊಳ್ಳೆಗಳ ಲಾರ್ವ ತಿನ್ನುವುದರಿಂದ ನಿಯಂತ್ರಣ ಸಾಧ್ಯ ಎಂದು ಹೇಳಿದರು.
ಪ್ರತಿ ಶುಕ್ರವಾರ ಒಣದಿನವಾಗಿ ಆಚರಿಸಬೇಕು ಏಕೆಂದರೆ ಡೆಂಗ್ಯುಗೆ ಕಾರಣವಾದ ಈಡೀಸ್ ಸೊಳ್ಳೆಗಳ ಲಾರ್ವ ಬೆಳೆಯಲು ೮ ದಿನವಾಗುವುದರಿಂದ ವಾರಕ್ಕೊಮ್ಮೆ ಮನೆಯಲ್ಲಿನ ಡ್ರಂ, ಸಂಪು, ಟ್ಯಾಂಕ್‌ಗಳಲ್ಲಿ ನೀರನ್ನು ಹೊರಹಾಕಿ ತೊಳೆದು ಹೊಸದಾಗಿ ನೀರು ಸಂಗ್ರಹಿಸಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ತಾಹೇರಾ ನುಸ್ರತ್ ಮಾತನಾಡಿ, ಡೆಂಗ್ಯೂ ಇಂದು ಅತಿ ವೇಗವಾಗಿ ಹರಡುತ್ತಿದೆ, ಇದರ ಕುರಿತು ಮುನ್ನಚ್ಚರಿಕೆ ವಹಿಸದಿದ್ದರೆ ಮಾರಣಾಂಗಿಕವಾಗಿಯೂ ಬದಲಾಗಬಹುದು ಎಂದು ತಿಳಿಸಿ, ಮಕ್ಕಳು ಸೊಳ್ಳೆಗಳ ನಿಯಂತ್ರಣಾ ಕ್ರಮಗಳನ್ನು ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯೆ ಅರುಣಮ್ಮ, ಆಶಾ ಕಾರ್ಯಕರ್ತೆ ಚಂದ್ರಮ್ಮ, ಶಾಲೆಯ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ ವೆಂಕಟರೆಡ್ಡಿ, ಲೀಲಾ, ಸುಗುಣಾ, ಶ್ವೇತಾ, ಫರೀದಾ, ಶ್ರೀನಿವಾಸಲು ರಮಾದೇವಿ, ಡಿ.ಚಂದ್ರಶೇಖರ್ ಮತ್ತಿತರರಿದ್ದರು.