ವರ್ಷದಲ್ಲಿ 350 ಕೋಟಿ ರೂ. ಭೂಮಿ ಹಂಚಿಕೆ: ಶ್ರೀವತ್ಸ
ಸಂಜೆವಾಣಿ ನ್ಯೂಸ್
ಮೈಸೂರು: ಜು.12:- ಒಂದು ವರ್ಷದಿಂದ ಈಚೆಗೆ 50:50 ಅನುಪಾತದಡಿ ನಾಲ್ಕೈದು ವ್ಯಕ್ತಿಗಳಿಗೆ 3 ಲಕ್ಷದ 15 ಸಾವಿರ ಚದರಡಿ ಭೂಮಿಯನ್ನು ಹಂಚಿಕೆ ಮಾಡಿದ್ದು, 350 ಕೋಟಿ ರೂ. ಮೌಲ್ಯದ ಭೂಮಿ ನೀಡಲಾಗಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ನಡೆದಿರುವ ಒಂದೊಂದೇ ಹಗರಣ ಎಪಿಸೋಡ್ಗಳಂತೆ ಹೊರ ಬರುತ್ತಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಬಾಗಿಲಿಗೂ ತಲುಪಿದೆ ಎಂದು ಹೇಳಿದರು.
50:50 ಅನುಪಾತದಡಿ 2023 ಮಾರ್ಚ್ ತಿಂಗಳಿಂದ ಜೂನ್ ತಿಂಗಳವರೆಗೆ ನಾಲ್ಕೈದು ವ್ಯಕ್ತಿಗಳಿಗೆ 3 ಲಕ್ಷ 15 ಸಾವಿರ ಚದರಡಿ ಕೊಟ್ಟಿರುವುದು ಪತ್ತೆಯಾಗಿದೆ. ಈ ಜಮೀನಿನಲ್ಲಿ 20*30 ಅಳತೆಯ ನಿವೇಶನವನ್ನು 540 ಜನರಿಗೆ ಕೊಡಬಹುದಾಗಿತ್ತು ಎಂದರು.
ಕಾಂಗ್ರೆಸ್ ಶಾಸಕರು ತಪ್ಪಾಗಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಾದರೆ ತನಿಖೆ ಅಗತ್ಯ ಏನು? ಇವರು ಕ್ಲಿನ್ ಚೀಟ್ ಕೊಟ್ಟ ಮೇಲೆ ತನಿಖೆ ಯಾಕೇ ಮಾಡಬೇಕು? 62 ಕೋಟಿ ಪರಿಹಾರ ಕೇಳುತ್ತಿರುವ ಮುಖ್ಯಮಂತ್ರಿಗಳು ಮೈಸೂರಲ್ಲಿ ಎಕರೆ ಜಮೀನಿಗೆ 20 ಕೋಟಿ ರೂ. ಇದೆಯೇ? ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ 2023ರ ನವೆಂಬರ್ 50:50 ಅನುಪಾತದಲ್ಲಿ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಲಾಗಿತ್ತು. ತಾಂತ್ರಿಕ ಸಮಿತಿ ವರದಿ ಸರ್ಕಾರಕ್ಕೆ ಸಲ್ಲಿಸಿದೆ. ಜಿಲ್ಲಾಧಿಕಾರಿಗಳು 15 ಪತ್ರ ಬರೆದಿದ್ದಾರೆ. ಕ್ರಮ ಕೈಗೊಂಡಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎಂದು ವಿವರಿಸಿದರು.
ಮುಡಾ ಹಗರಣದ ಸಂಬಂಧ ರಾಜ್ಯಪಾಲರು, ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದೇನೆ. ಕರೆದರೆ ದಾಖಲೆ ಸಮೇತ ವಿವರ ಕೊಡುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರು ಮುಡಾದಲ್ಲಿ ಜನಪ್ರತಿನಿಧಿಗಳು ಯಾಕೇ ಸದಸ್ಯರಾಗಬೇಕು ಎಂಬ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದರು.
ಮುಡಾದಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿರುವುದು ಸ್ಪಷ್ಟವಾಗಿದೆ. ಆದರೆ, ಸರ್ಕಾರಕ್ಕೆ ಮೊಂಡಾಟಕ್ಕೆ ಬಿದ್ದಿದೆ ಎಂದರು.