ನಾಳೆ ನಿರಂತರ ಕುಡಿಯುವ ನೀರು ಯೋಜನೆಗೆ ಭೂಮಿಪೂಜೆ
ಅಥಣಿ :ಜು.12: ಪಟ್ಟಣಕ್ಕೆ ಅಮೃತ 2.0 ಯೋಜನೆಯಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ನಿರಂತರ 2್ಠ47 ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ನಾಳೆ ಶನಿವಾರ ಜು 13 ರಂದು ಮುಂಜಾನೆ 11 – 30 ಗಂಟೆಗೆ ಪಟ್ಟಣದ ರಾಣಿ ಚೆನ್ನಮ್ಮ ವೃತ್ತದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹತ್ತಿರ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ.
18 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿರುವ ಈ ಯೋಜನೆಯ ಒಟ್ಟು ವೆಚ್ಚ 116.40 ಕೋಟಿ ರೂ.ಗಳಷ್ಟಿದ್ದು, ಈ ಯೋಜನೆಗೆ ಶೇ 50 ರಷ್ಟು ಕೇಂದ್ರ, ಶೇ 40 ರಷ್ಟು ರಾಜ್ಯ ಮತ್ತು ಶೇ 10 ರಷ್ಟು ಸ್ಥಳೀಯ ಸಂಸ್ಥೆಯ ಅನುದಾನ ನಿಗದಿಯಾಗಿದೆ. 2011 ರ ಜನಗಣತಿ ಪ್ರಕಾರ ಅಥಣಿ ಪಟ್ಟಣದ ಜನಸಂಖ್ಯೆ 47847 ರಷ್ಟಿದ್ದು, 2025 ಕ್ಕೆ 62003 ರಷ್ಟು ಜನಸಂಖ್ಯೆ ಆಗಬಹುದು ಅಂದಾಜಿಸಿ ಪ್ರಸ್ತುತ ಯೋಜನೆಯನ್ನು 2040 ರ ಮಧ್ಯಂತರ ಮತ್ತು 2055 ಅಂತಿಮ ವರ್ಷ ಪರಿಗಣಿಸಿ ಕುಡಿಯುವ ನೀರಿನ ಅವಶ್ಯಕತೆ ಅನುಸಾರ ವಿನ್ಯಾಸ ಮಾಡಲಾಗಿದೆ.
ಪಟ್ಟಣದಲ್ಲಿ ಈಗಾಗಲೇ 4.5 ದಶಲಕ್ಷ ಲೀಟರ್ ಸಾಮಥ್ರ್ಯದ ನೀರು ಶುದ್ಧೀಕರಣ ಘಟಕ ಇದ್ದು, ಇದರೊಂದಿಗೆ ಹೆಚ್ಚುವರಿಯಾಗಿ 9.0 ದಶಲಕ್ಷ ಲೀಟರ್ ಸಾಮಥ್ರ್ಯದ ನೀರು ಶುದ್ಧೀಕರಣ ಘಟಕದ ನಿರ್ಮಾಣದೊಂದಿಗೆ ಒಟ್ಟು 13.5 ದಶಲಕ್ಷ ಲೀಟರ್ ಆಗಲಿದೆ
ಈ ಯೋಜನೆಯಡಿ ಹುಲಗಬಾಳ ಗ್ರಾಮದ ಹತ್ತಿರ ಕೃಷ್ಣಾ ನದಿ ದಡದಲ್ಲಿ ಜಾಕವೆಲ್ ಒಳಗೊಂಡಂತೆ ಇತರೆ ಮೂಲ ಸ್ಥಾವರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಥಣಿ ಪಟ್ಟಣದಲ್ಲಿ ಈಗಾಗಲೇ ಇರುವ ಜಲ ಸಂಗ್ರಹಗಾರಗಳನ್ನು ಒಳಗೊಂಡಂತೆ ಹೆಚ್ಚುವರಿಯಾಗಿ 5 ಹೊಸ ಮೇಲ್ಮಟ್ಟದ ಜಲ ಸಂಗ್ರಹಗಾರಗಳನ್ನು ಜತ್ತ ರೋಡ ಚಮಕೇರಿ ಮಡ್ಡಿ, ಹುಡ್ಕೋ ಕಾಲನಿ. ಮಿನಿ ವಿಧಾನ ಸೌಧದ ಹಿಂದೆ, ಮದ್ದಿನ ಮಡ್ಡಿ, ಸಾಯಿ ನಗರ ಚರ್ಚ ಹತ್ತಿರ ಮತ್ತು ಸಂಗಮೇಶ ನಗರಗಳಲ್ಲಿ ನಿರ್ಮಿಸಲಾಗುವುದು ಎಂದು ಮಂಡಳಿಯ ಅಥಣಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉಮೇಶ ಆರ್ ಕೆ ತಿಳಿಸಿದ್ದಾರೆ.
ಈಗಿದ್ದ ವ್ಯವಸ್ಥೆಯಲ್ಲಿ ಪಟ್ಟಣಕ್ಕೆ ಮೂರು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊರತೆಯಾಗುತ್ತಿತ್ತು ಈ ಕೊರತೆಯನ್ನು ನೀಗಿಸಲು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿಯವರ ಸತತ ಪ್ರಯತ್ನದ ಫಲವಾಗಿ ಈ ಯೋಜನೆಗೆ ಮಂಜೂರಾತಿ ದೊರಕಿದೆ. ಈ ಯೋಜನೆಯ ಕಾಮಗಾರಿಯನ್ನು ಸಾಂಗಲಿಯ ಸಹ್ಯಾದ್ರಿ ಕನ್ಸಟ್ರಕ್ಷನ್ ನಿರ್ವಹಿಸಲಿದೆ.