ಹಳೆ ಜೇವರ್ಗಿ ರಸ್ತೆಯಲ್ಲಿನ ಒತ್ತುವರಿ ತೆರವು: ಹಠಾತ್ ಕಾರ್ಯಾಚರಣೆಗೆ ಹಲವರ ಆಕ್ರೋಶ
ಕಲಬುರಗಿ:ಸೆ.27: ನಗರದ ಹಳೆ ಜೇವರ್ಗಿ ರಸ್ತೆಯಲ್ಲಿನ ಆದರ್ಶ ನಗರದಲ್ಲಿನ ಎರಡನೇ ಕ್ರಾಸ್‍ನ ಮಾರ್ಗದ ಎರಡು ಬದಿಯ ಒತ್ತುವರಿಯನ್ನು ಮಹಾನಗರ ಪಾಲಿಕೆಯ ವಲಯ ಆಯುಕ್ತರ ನಿರ್ದೇಶನದಂತೆ ಶುಕ್ರವಾರ ತೆರವುಗೊಳಿಸಲಾಯಿತು.
ಜೆಸಿಬಿಗಳೊಂದಿಗೆ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಸ್ತೆ ಬದಿಯಲ್ಲಿನ ಅಂಗಡಿ, ಮುಂಗಟ್ಟುಗಳು ಹಾಗೂ ಮನೆಗಳ ಒತ್ತುವರಿಯನ್ನು ತೆರವುಗೊಳಿಸಿದರು. ಹಲವು ಅಂಗಡಿಗಳ ಶೆಡ್‍ಗಳು ಸೇರಿದಂತೆ ಕಟ್ಟಡಗಳನ್ನು ಪೋಲಿಸ್ ಬಂದೋಬಸ್ತ್‍ನಲ್ಲಿ ತೆರವುಗೊಳಿಸಿದರು.
ನೋಟಿಸ್ ಕೊಟ್ಟು ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಹೇಳಿದರೆ, ಸಾರ್ವಜನಿಕರು ಮಾತ್ರ ಅದನ್ನು ಒಪ್ಪದೇ ಏಕಪಕ್ಷೀಯವಾಗಿ ಹಠಾತ್ತನೇ ದಾಖಲಾತಿಗಳು ಇದ್ದರೂ ಸಹ ನಮ್ಮ ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸೈನಿಕ ಮನ್ಮಥ ಮಠಪತಿ ಅವರು ಪಾಲಿಕೆಯ ಕಾರ್ಯಾಚರಣೆಯನ್ನು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಡಾವಣೆಯಲ್ಲಿ ರಸ್ತೆ ನಿರ್ಮಿಸಬೇಕು ಎಂದು ಬಡಾವಣೆಯ 25 ಜನರ ಸಹಿಯೊಂದಿಗೆ ನಾನು ಮನವಿ ಸಲ್ಲಿಸಿದ್ದೆ. ಆ ಕೆಲಸವನ್ನು ಮಾಡದೇ ನನಗೆ ಗುರಿಯಾಗಿರಿಸಿ ನನ್ನ ಅಂಗಡಿಯನ್ನು ಪಾಲಿಕೆಯವರು ತೆರವುಗೊಳಿಸಿದ್ದಾರೆ ಎಂದು ದೂರಿದರು.
ನನ್ನ ಅಂಗಡಿಯು ರಸ್ತೆ ಮೇಲೆ ಒತ್ತುವರಿಯಾಗಿಲ್ಲ. ಒಂದು ವೇಳೆ ಒತ್ತುವರಿಯಾಗಿದ್ದರೆ ನನಗೆ ನೋಟಿಸ್ ಕೊಡಬೇಕಿತ್ತು. ಹಾಗೊಂದು ವೇಳೆ ನೋಟಸ್ ನೀಡಿದ್ದರೆ ನಾನೇ ನನ್ನ ಒತ್ತುವರಿಯನ್ನು ಮಹಾನಗರ ಪಾಲಿಕೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ತೆರವುಗೊಳಿಸುತ್ತಿದ್ದೆ. ಆ ಕ್ರಮವನ್ನು ಕೈಗೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ಸಹಾಯಕ ನಿರ್ದೇಶಕ ಡಿ.ಜೆ. ಬಿರಾದಾರ್ ಅವರು ಮಾತನಾಡಿ, ಈಗ ನಂದು ಅಲ್ಲಿಂದ ಒಂದು ಅಡಿ ಮುಂದೆ ಇದೆ. ಎರಡು ಸ್ಟೆಪ್ ಉಳೀತಿತ್ತು. ಅದನ್ನು ಅವರು ಒಡೆದು ಹೋಗಿದ್ದಾರೆ. ನಾನು ಎಲ್ಲರಕ್ಕಿಂತ ಎತ್ತರದಲ್ಲಿ ಮನೆಯನ್ನು ನಿರ್ಮಾಣ ಮಾಡಿದ್ದೆ. ದಾಖಲಾತಿಗಳನ್ನು ತೋರಿಸಿದರೂ ಸಹ ಒಡೆದು ಹೋಗಿದ್ದಾರೆ. ಒಡೆಯಲಿಕ್ಕೆ ಅಭ್ಯಂತರವಿಲ್ಲ. ಮೆಟ್ಟಿಲುಗಳನ್ನು ಬಿಡಬೇಕಾಗಿತ್ತು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇನ್ನೋರ್ವ ವ್ಯಕ್ತಿ ಮಾತನಾಡಿ, ನಮ್ಮದು ಒತ್ತುವರಿಯಿದ್ದಿರಲಿಲ್ಲ. ಆವರಣದ ಗೋಡೆಯೊಂದಿಗೆ ಕಟ್ಟಡವನ್ನು ತೆರವುಗೊಳಿಸಿದ್ದಾರೆ. ಯಾವುದೇ ರೀತಿಯಲ್ಲಿ ನೋಟಿಸ್ ನೀಡಿಲ್ಲ ಎಂದು ದೂರಿದರು.